ಕಲಬುರಗಿ | ರಿಂಗ್ ರೋಡಿನ ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸುವಂತೆ ಫೌಝಿಯಾ ತರನ್ನುಮ್ ಸೂಚನೆ

ಕಲಬುರಗಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಇತ್ತೀಚೆಗೆ ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಯಮಿತದ ಅಧ್ಯಕ್ಷರು ಮತ್ತು ಕಲಬುರಗಿ ಉತ್ತರ ಶಾಸಕಿ ಖನೀಜ್ ಫಾತಿಮಾ ಜೊತೆ ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಪಂಪ್- ಹುಮನಾಬಾದ್ ಬೇಸ್ ನಡುವಿನ ಹಾಗರಗಾ ಕ್ರಾಸ್, ಸನಾ ಚೌಕ್ ಸರ್ಕಲ್ಗಳಿಗೆ ಭೇಟಿ ನೀಡಿ ರಿಂಗ್ ರೋಡ್ ಪಕ್ಕದಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸುವಂತೆ ಎನ್.ಎಚ್.ಎ.ಐ. ಅಧಿಕಾರಿಗಳಿಗೆ ಸೂಚಿಸಿದರು.
ಸರ್ವಿಸ್ ರಸ್ತೆ ಇಲ್ಲದ ಕಾರಣ ರಸ್ತೆ ಅಪಘಾತ ಹೆಚ್ಚಾಗುತ್ತಿರುವ ಕಾರಣ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸರ್ವಿಸ್ ರಸ್ತೆ ಕಾಮಗಾರಿ ವಿಳಂಬಕ್ಕೆ ಇರುವ ಅಡ್ಡಿಗಳನ್ನು ಪರಿಶೀಲಿಸಿದರು.
ಎನ್.ಎಚ್.ಎ.ಐ. ಯೋಜನಾ ನಿರ್ದೇಶಕ ಮಹೇಶ ಬಿ.ಪಾಟೀಲ ಮಾತನಾಡಿ, ಖರ್ಗೆ ಪೆಟ್ರೋಲ್ ಪಂಪ್- ಹುಮನಾಬಾದ್ ಬೇಸ್ ನಡುವಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲು ರಸ್ತೆ ಬದಿಯಲ್ಲಿರುವ ಮರ, ವಿದ್ಯುತ್ ಕಂಬ ಇರುವುದರಿಂದ ವಿಳಂಬಾವಾಗುತ್ತಿದೆ, ಇದನ್ನು ಕ್ರಮವಾಗಿ ಕತ್ತರಿಸಲು, ಶಿಫ್ಟ್ ಮಾಡಲು ಸಂಬಂಧಪಟ್ಟ ಇಲಾಖೆಗೆ ಕೋರಲಾಗಿದೆ ಎಂದು ಡಿ.ಸಿ. ಮತ್ತು ಶಾಸಕರಿಗೆ ಮಾಹಿತಿ ನೀಡಿದರು.
ಒಂದು ವಾರದಲ್ಲಿ ಕಾಮಗಾರಿಗೆ ಇರುವ ಅಡ್ಡಿಗಳನ್ನು ಅರಣ್ಯ ಮತ್ತು ಜೆಸ್ಕಾಂ ಇಲಾಖೆಯಿಂದ ಸರಿಪಡಿಸಲಾಗುವುದು. ಯಾವುದೇ ತೊಂದರೆ ಇಲ್ಲದ ಕಡೆ ಸೇವಾ ರಸ್ತೆ ಕೂಡಲೆ ಆರಂಭಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಶಾಸಕಿ ಖನೀಜ್ ಪಾತಿಮಾ ಮಾತನಾಡಿ, ಸೇವಾ ರಸ್ತೆ ಆರಂಭಕ್ಕೆ ಸ್ಥಳೀಯರಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು, ಕೂಡಲೆ ಕೆಲಸ ಆರಂಭಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಸಹಾಯಕ ಆಯುಕ್ತೆ ಸಾಹಿತ್ಯ, ಎನ್.ಎಚ್.ಎ.ಐ. ಸೈಟ್ ಇಂಜಿನೀಯರ್ ಶಿವಪ್ರಕಾಶ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜೇವರ್ಗಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಡಿ.ಸಿ. ಬಿ.ಫೌಝಿಯಾ ತರನ್ನುಮ್ ಅಲ್ಲಿ ಕಂದಾಯ ದಾಖಲೆಗಳ ಡಿಜಟಲೀಕರಣ ಕಾರ್ಯ ವೀಕ್ಷಿಸಿದರು. ತಹಶೀಲ್ದಾರ್ ಮಲ್ಲಣ್ಣ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.