ಕಲಬುರಗಿ | ಜ.1ರಂದು ಡಾ.ಪಿ.ಎಸ್ ಶಂಕರ್ ಪ್ರತಿಷ್ಠಾನದಿಂದ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿ ಪ್ರದಾನ : ನರೇಂದ್ರ ಬಡಶೇಶಿ
ಕಲಬುರಗಿ : ಡಾ.ಪಿ.ಎಸ್ ಶಂಕರ್ ಪ್ರತಿಷ್ಠಾನದ ರಜತೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ, ವೈದ್ಯ ವಿದ್ಯಾರ್ಥಿವೇತನ ವಿತರಣೆ ಹಾಗೂ ವಿಜ್ಞಾನ ಕ್ಯಾಲೆಂಡರ್ ಬಿಡುಗಡೆಯ ಕಾರ್ಯಕ್ರಮವನ್ನು ಜ.1ರಂದು ಸಂಜೆ 5ಗಂಟೆಗೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯಧ್ಯಕ್ಷ ಡಾ.ಎಚ್.ವೀರಭದ್ರಪ್ಪ ಮತ್ತು ಕಾರ್ಯದರ್ಶಿ ನರೇಂದ್ರ ಬಡಶೇಶಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರದ ಅಕ್ಕಮಹಾದೇವಿ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಲಾ, ಯಾದಗಿರಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ಎಸ್.ಮುಧೋಳ್ ಅವರು ಆಗಮಿಸಲಿದ್ದಾರೆ ಎಂದರು.
ಈ ಸಲದ ಡಾ.ಪಿ.ಎಸ್ ಶಂಕರ್ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿಯನ್ನು ಹೆಲ್ತ್ ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ.ಬಿ.ಎಸ್.ಅಜಯ್ ಕುಮಾರ್, ಡಾ.ಪಿ.ಎಸ್.ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯು ಮೈಸೂರಿನ ಸುಯೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎಸ್.ಪಿ.ಯೋಗಣ್ಣ ಅವರಿಗೆ ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.
2024- 25ನೇ ಸಾಲಿನ ಸಾಲಿನಲ್ಲಿ ವೈದ್ಯ ವಿದ್ಯಾರ್ಥಿ ವೇತನಕ್ಕಾಗಿ 65 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 10 ವಿದ್ಯಾರ್ಥಿಗಳನ್ನು ವೈದ್ಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗಿದ್ದು, ಓರ್ವ ವಿದ್ಯಾರ್ಥಿಯನ್ನು ಇಂಜಿನಿಯರಿಂಗ್ ವಿದ್ಯಾರ್ಥಿ ವೇತನಕ್ಕೆ ಆರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಅಂಬಿಕಾ ಶಂಕರ್ ಅವರು ವಹಿಸಲ್ಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಎಸ್.ಎ.ಮಾಲಿಪಾಟೀಲ್ ಸದಾನಂದ ಮಹಾಗಾಂಕರ್, ರಾಮಕೃಷ್ಣ ರೆಡ್ಡಿ ಡಾ.ವಿಜಯಾನಂದ ಧಾರವಾಡ, ಮಲ್ಲಿಕಾರ್ಜುನ್ ಖುರಾಳ, ಡಾ.ರಾಜಶ್ರೀ ಹಾಜರಿದ್ದರು.