ಕಲಬುರಗಿ | ಏ.1 ರಂದು ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ: ದಶರಥ ಕಲಗುರ್ತಿ

ಕಲಬುರಗಿ : ಸುರಕ್ಷಾ ಆಸ್ಪತ್ರೆ ಪರವಾನಿಗೆ ರದ್ದು ಪಡಿಸುವಂತೆ ಒತ್ತಾಯಿಸಿ ಹಾಗೂ ಎಂ.ಬಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆ ಕ್ಟರ್ ಶಿವಾನಂದ ವಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇದೇ ಏ.1 ರಂದು ಬೆಳಗ್ಗೆ 11 ಗಂಟೆಗೆ ಡಾ.ಬಾಬು ಜಗಜೀವನರಾವ ಪುತ್ಥಳಿಯಿಂದ ಮೆರವಣಿಗೆ ಮೂಲಕ ತೆರಳಿ ನಗರ ಪೊಲೀಸ್ ಅಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ದಶರಥ ಎಮ್.ಕಲಗುರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಣಂತಿ ಸಾವಿಗೆ ನಗರದ ಕುಸನೂರು ರಸ್ತೆಯಲ್ಲಿರುವ ಸುರಕ್ಷಾ ಆಸ್ಪತ್ರೆಯ ಡಾ.ಚಂದ್ರಿಕಾ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣರಾಗಿದ್ದು, ಆಸ್ಪತ್ರೆಯ ಪರವಾನಿಗೆ ರದ್ದು ಪಡಿಸುವಂತೆ ಒತ್ತಾಯಿಸಿ ಹಾಗೂ ಗುಂಡಾವರ್ತನೆ ತೋರಿ ಜಾತಿನಿಂದನೆ ಮಾಡಿದ ಪಿಐ ಶಿವಾನಂದ ವಾಲಿಕಾರ ಅವರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು ಎಂದು ಮಾ.12 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದು ಅನಿರ್ವಾಯವಾಗಿದೆ ಎಂದರು.
ಮಂಜು ನಾಲವಾರಕರ್ ಮಾತನಾಡಿ , ‘ಸುರಕ್ಷಾ ಹೆರಿಗೆ ಆಸ್ಪತ್ರೆಯಲ್ಲಿ ಮಾ.3ರಂದು ಡಾ.ಚಂದ್ರಿಕಾ ಅವರು ಜ್ಯೋತಿ ಕಟ್ಟಿಮನಿ ಎನ್ನುವ ಗರ್ಭಿಣಿಯನ್ನು ಹೆರಿಗೆಗಾಗಿ ದಾಖಲು ಮಾಡಿಕೊಂಡಿದ್ದರು. ಮಾ.4ರಂದು ಸಿಸೇರಿಯನ್ ಹೆರಿಗೆ ಆಗಿದೆ. ಮಾ.5ರಂದು ಬೆಳಗಿನ ಜಾವ ಬಾಣಂತಿ ಜ್ಯೋತಿ ಅವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಬೆನ್ನು ನೋವು, ಉಸಿರಾಟದ ತೊಂದರೆಯಾದಾಗ ವೈದ್ಯರಿಗೆ, ಸಿಬ್ಬಂದಿಗೆ ತಿಳಿಸಿದರೂ, ಕಾಲಹರಣ ಮಾಡಿದ್ದಾರೆ. 4–5 ತಾಸು ಬಿಟ್ಟು ವೈದ್ಯರು ತಪಾಸಣೆ ಮಾಡಿದ್ದಾರೆ. ಡಾ.ಚಂದ್ರಿಕಾ ಸಮಯ ಮೀರಿದ ಮೇಲೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ವಿಫಲವಾಗಿದ್ದರಿಂದ ಜ್ಯೋತಿ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದರು.
‘ಜ್ಯೋತಿ ಅವರ ಸಾವಿನಿಂದ ಕುಪಿತಗೊಂಡ ಕುಟುಂಬಸ್ಥರು ವೈದ್ಯರೊಂದಿಗೆ ಮಾತಿನ ಚಕುಮಕಿ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಎಂ.ಬಿ.ನಗರ ಠಾಣೆಯ ಪಿಐ ಶಿವಾನಂದ ವಾಲಿಕಾರ್ ಮೃತ ಮಹಿಳೆಯ ಕುಟಂಬಸ್ಥರಿಗೆ ಜಾತಿನಿಂದನೆ, ಹಲ್ಲೆ ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಭೀಮಣ್ಣ ಬಿಲ್ಲವ, ಶಾಮ ನಾಟೇಕರ್, ರಾಜು ವಾಡೇಕರ, ರಮೇಶ ವಾಡಕೇರ, ರಂಜೀತಕುಮಾರ ಮೂಲಿಮನಿ, ಪ್ರದೀಪ್ ಭಾವೆ, ಪ್ರಹ್ಲಾದ್ ಹಡಗೀಲಕರ ಸೇರಿದಂತೆ ಇತರರು ಇದ್ದರು