ಕಲಬುರಗಿ | ಅಪ್ಪನ ಕೆರೆಯಲ್ಲಿ ಬೋಟಿಂಗ್ ಗೆ ಪ್ರಾದೇಶಿಕ ಆಯುಕ್ತ ಕೃಷ್ಣಬಾಜಪೇಯಿ ಚಾಲನೆ
ಕಲಬುರಗಿ : ಶರಣಬಸವೇಶ್ವರ ಕೆರೆ (ಅಪ್ಪನಕೆರೆ) ಯಲ್ಲಿ ಸಂಕ್ರಾಂತಿ ಹಬ್ಬದ ಸಡಗರದ ನಡುವೆ ದೋಣಿ ವಿಹಾರಿಗಳು ಬೋಟಿಂಗ್ ನಡೆಸಿ ಸಂಭ್ರಮಿಸಿದರು. ಪ್ರಾದೇಶಿಕ ಆಯುಕ್ತರು ಹಾಗೂ ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣ ಬಾಜಪೇಯಿಯವರು ಬಾಲಕಿಯರ ಬಾಲ ಮಂದಿರದ ಮಕ್ಕಳ ಜೊತೆ ಕೆರೆಯಲ್ಲಿ ಬೋಟಿಂಗ್ ಮಾಡಿ ಶುಭಾರಂಭಗೊಳಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಪಾಲಿಕೆ ಆಯುಕ್ತರಾದ ಭುವನೇಶ್ ಪಾಟೀಲ್ ಜೊತೆ ಜ.13ರಂದು ಸೋಮವಾರ ಅಪ್ಪನ ಕೆರೆಯಲ್ಲಿ ಬೋಟಿಂಗ್ ಮಾಡಿ ಸಂಭ್ರಮದಲ್ಲಿ ಪಾಲ್ಗೊಂಡರು. ಖುಷಿಯಲ್ಲಿ ತೇಲಾಡುತ್ತಿದ್ದ ಮಕ್ಕಳು ಬೋಟಿಂಗ್ ನ ವೇಳೆ ಕುಣಿದು ಕುಪ್ಪಳಿಸಿ "ಹಿಪ್ ಹಿಪ್ ಹುರ್ರೆ" ಘೋಷಣೆ ಕೂಗಿ ಸಡಗರ ಅನುಭವಿಸಿದರು. ಬಾಲ ಮಂದಿರದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉದ್ಘಾಟನಾ ಬೋಟಿಂಗ್ ನ ಮೊದಲ ಪಯಣಕ್ಕೆ ಸಾಕ್ಷಿಯಾದರು. ಬೋಟ್ ಜೆಟ್ಟಿ ಬಳಿ ಗಿಡ ನೆಡುವುದರ ಮೂಲಕ ಹಾಗೂ ರಿಬ್ಬನ್ ಕತ್ತರಿಸಿ ಬೋಟಿಂಗ್ ಗೆ ಕೃಷ್ಣ ಬಾಜಪೇಯಿ ಚಾಲನೆ ನೀಡಿದರು.
ಬೋಟಿಂಗ್ ನ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಕೃಷ್ಣಭಾಜಪೇಯಿಯವರು, 'ಶರಣಬಸವೇಶ್ವರ ಕೆರೆ ಇತ್ತೀಚೆಗೆ ಆದಾಯ ಗಳಿಕೆಯಲ್ಲಿ ಪ್ರಗತಿ ಹೊಂದಿದ್ದು ಪ್ರವೇಶ ಶುಲ್ಕ, ಆಹಾರ ಮಳಿಗೆ, ಮನರಂಜನಾ ಸೆಂಟರ್ ಗಳಿಂದ ತಿಂಗಳಿಗೆ 4 ರಿಂದ 5 ಲಕ್ಷ ರೂ. ಆದಾಯ ಬರುತ್ತಿದೆ. ಈಗ ಬೋಟಿಂಗ್ ಕೂಡಾ ಸೇರ್ಪಡೆಗೊಂಡಿರುವುದರಿಂದ ಆದಾಯ ಇನ್ನಷ್ಟು ವೃದ್ಧಿಯಾಗಲಿದೆ. ಇದರಿಂದ ಕೆರೆಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಮಾತನಾಡಿ, ಅಪ್ಪನ ಕೆರೆಯಲ್ಲಿ ಬೋಟಿಂಗ್ ಪ್ರಾರಂಭವಾಗಿರುವುದರಿಂದ ಮಕ್ಕಳಿಗೆ ಖುಷಿಯಾಗಿದೆ, ಸಾರ್ವಜನಿಕರು ತಮ್ಮ ರಜಾ ದಿನಗಳಲ್ಲಿ ಶರಣಬಸವೇಶ್ವರ ಕೆರೆ ಹಾಗೂ ಉದ್ಯಾನದ ಮನರಂಜನೆಯನ್ನು ಅನುಭವಿಸಿ ಕೆರೆ, ಪಾರ್ಕ್ ಗಳ ಸಂರಕ್ಷಣೆಗೆ ಕೈಜೋಡಿಸಬೇಕಾಗಿದೆ. ಪ್ರಾದೇಶಿಕೆ ಆಯುಕ್ತರ ಸತತ ಶ್ರಮದಿಂದ ಬೋಟಿಂಗ್ ಪ್ರಾರಂಭವಾಗಿದ್ದು, ಸಾರ್ವಜನಿಕರಿಗೆ ಸಂಕ್ರಾಂತಿ ಹಬ್ಬದ ದೊಡ್ಡ ಗಿಫ್ಟ್ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ್ ಮಾತನಾಡಿ, ಕಲಬುರಗಿ ಜನತೆಯ ಬಹುಕಾಲದ ಕನಸು ಈಗ ನನಸಾಗಿದೆ. ಕಲಬುರಗಿಯ ಪ್ರವಾಸಿ ನಕ್ಷೆಯಲ್ಲಿ ಶರಣಬಸವೇಶ್ವರ ಕೆರೆಯೂ ಕೂಡ ಸೇರ್ಪಡೆಗೊಂಡು ಪ್ರವಾಸಿಗರಿಗೆ ಮತ್ತು ಈ ಭಾಗದ ಜನರಿಗೆ ಇದೊಂದು ಅದ್ಭುತ ಪ್ರಕೃತಿ ರಮಣೀಯ ತಾಣವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುಲ್ಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಜಿ.ಎಸ್ ಮಳಗಿ, ಕೆರೆ ನಿರ್ವಹಣಾ ಪ್ರಾಧಿಕಾರದ ತಾಂತ್ರಿಕ ಸಲಹೆಗಾರರಾದ ಭರತ್ ಭೂಷಣ್, ಸಲಹಾ ಸಮಿತಿಯ ಸದಸ್ಯರಾದ ಡಾ.ಸದಾನಂದ ಪೆರ್ಲ, ಪ್ರೊ.ಶಂಕರಪ್ಪ ಹತ್ತಿ, ನೋಪಾಸನ ಬೋಟ್ ಕ್ಲಬ್ ನ ಶಕೀಬ್ , ಸಾಂಸ್ಕೃತಿಕ ಸಮಿತಿ ಸದಸ್ಯರಾದ ಬಸವ ಪ್ರಭು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.