ಕಲಬುರಗಿ | 15 ನಿಮಿಷ ತಡವಾಗಿ ನೀಡಿದ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ; ವಿದ್ಯಾರ್ಥಿ, ಪಾಲಕರು ಆಕ್ರೋಶ

ಕಲಬುರಗಿ: ಚಿತ್ತಾಪುರ ಪಟ್ಟಣದ ಹೊರವಲಯದ ನಾಗಾವಿ ಕ್ಯಾಂಪಸ್ ನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಕೊಡಬೇಕಾಗಿದ್ದ ಪ್ರಶ್ನೆಪತ್ರಿಕೆ 15 ನಿಮಿಷ ತಡವಾಗಿ ನೀಡಿದ ಪ್ರಸಂಗ ಶುಕ್ರವಾರ ನಡೆದಿದೆ.
ಪರೀಕ್ಷೆಯ ಮೊದಲ ದಿನ ಇಂಗ್ಲಿಷ್ ಪತ್ರಿಕೆಯ ದಿನದಂದು ಈ ರೀತಿಯ ಘಟನೆ ಆಗಿದ್ದರಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿರುವುದು ಕಂಡುಬಂದಿದೆ. ಪ್ರಶ್ನೆಪತ್ರಿಕೆ ವಿಳಂಬವಾಗಿ ನೀಡಿದ ಪರೀಕ್ಷೆ ಕರ್ತವ್ಯ ಮೇಲಿದ್ದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಪರೀಕ್ಷೆಗೆ 15 ವಿಳಂಬವಾಗಿ ಪ್ರಶ್ನೆಪತ್ರಿಕೆ ನೀಡಿದ್ದರಿಂದ ನಮಗೆ 15 ನಿಮಿಷ ಹೆಚ್ಚುವರಿ ಸಮಯ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಾಗ ಈ ವಿಷಯ ಹೊರಗಡೆ ಪಾಲಕರಿಗೆ ತಿಳಿಯುತ್ತಿದ್ದಂತೆ ಪಾಲಕರೂ ಸಹ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆದರ್ಶ ವಿದ್ಯಾಲಯದಲ್ಲಿ 17 ಬ್ಲಾಕ್ ಇರುವುದರಿಂದ ಎಲ್ಲಾ ಕೊಠಡಿಗಳಿಗೆ ಹೋಗಿ ಪ್ರಶ್ನೆಪತ್ರಿಕೆಗಳು ಕೊಡುವ ಸಮಯದಲ್ಲಿ ಮೂರು ಕೊಠಡಿಗಳಿಗೆ ಸ್ವಲ್ಪ ವಿಳಂಬವಾಗಿ ತಲುಪಿವೆ ಎಂದು ಚೀಟಿಂಗ್ ಸ್ಕ್ವಾಡ್ ಪ್ರಕಾಶ್ ನಾಯ್ಕೋಡಿ ಸ್ಪಷ್ಟನೆ ನೀಡಿದ್ದಾರೆ.