ಕಲಬುರಗಿ | ಲಲಿತಕಲಾ ವಿವಿ ಸ್ಥಾಪನೆಗೆ ಕ್ರಮ ವಹಿಸಬೇಕು : ಡಾ.ಶ್ರೀನಿವಾಸ ಸಿರನೂರಕರ್

ಕಲಬುರಗಿ : ಬಹು ದಿನಗಳ ಬೇಡಿಕೆಯಾಗಿದ್ದ ಲಲಿತಕಲಾ ವಿಶ್ವವಿದ್ಯಾಲಯ ಜಿಲ್ಲೆಯಲ್ಲಿ ಸ್ಥಾಪಿಸಲು ಸರಕಾರ ಕ್ರಮ ವಹಿಸಬೇಕು ಎಂದು ಹಿರಿಯ ಪತ್ರಕರ್ತ ಡಾ.ಶ್ರೀನಿವಾಸ ಸಿರನೂರಕರ್ ಒತ್ತಾಯಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರದಂದು ನುಡಿ ಸೇವಕ ಗುರುಬಸಪ್ಪ ಸಜ್ಜನಶೆಟ್ಟಿ ವೇದಿಕೆಯಡಿಯಲ್ಲಿ ಏರ್ಪಡಿಸಿದ ಪ್ರಪ್ರಥಮ ಜಿಲ್ಲಾ ಮಟ್ಟದ ದೃಶ್ಯಕಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ಭಾಗದಲ್ಲಿ ಅನೇಕ ಕಲಾವಿದರದ್ದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಒತ್ತಡದ ಜೀವನದಲ್ಲಿ ಸಾಗುತ್ತಿರುವ ಹಾಗೂ ಡಿಜಿಟೆಲ್ ಯುಗದಲ್ಲಿರುವ ನಮಗೆ ಲಲಿತ ಕಲೆಗಳ ಪ್ರಜ್ಞೆ ಬೆಳೆಸಬೇಕಾಗಿದೆ. ಜತೆಗೆ ಮುಂದಿನ ಪೀಳಿಗೆಗೆ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಉಳಿಸಿ ಬೆಳೆಸಲು ಇಂಥ ವಿಶ್ವವಿದ್ಯಾಲಯಗಳ ಅವಶ್ಯಕತೆಯಿದೆ. ಅಂತರ್ ರಾಷ್ಟ್ರೀಯ ಖ್ಯಾತ ಕಲಾವಿದರಾದ ಡಾ.ಎಸ್.ಎಂ.ಪಂಡಿತ ಅವರ ಹೆಸರಿನಲ್ಲಿ ರಾಷ್ಟಮಟ್ಟದ ಪ್ರಶಸ್ತಿಯನ್ನು ರಾಜ್ಯ ಸರಕಾರ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.
ಸಮ್ಮೇಳನಾಧ್ಯಕ್ಷ ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯದ ವಿಶ್ರಾಂತ ವಿಶೇಷಾಧಿಕಾರಿ ಡಾ.ಎಸ್.ಸಿ.ಪಾಟೀಲ ಮಾತನಾಡಿ, ಭಾರತೀಯ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಸ್ಥಾಪಿಸಬೇಕು. ಇಂಥ ಕಲಾ ಪರಂಪರೆ ಬೆಳೆಸುತ್ತಿರುವ ಕಲಾವಿದರಿಗೆ ಮುಕ್ತ ಅವಕಾಶಗಳು ದೊರೆಯಬೇಕಾಗಿದ್ದು, ಈ ದಿಸೆಯಲ್ಲಿ ಸರಕಾರ ಆರ್ಟ್ ಗ್ಯಾಲರಿ ಸ್ಥಾಪಿಸುವ ಮೂಲಕ ಅನುಕೂಲ ಮಾಡಿಕೊಡಬೇಕು. ಕಲೆಗಳನ್ನು ಡಿಜಿಟೆಲ್ ಅಧ್ಯಯನವಾಗಬೇಕು. ಪದವಿ ತರಗತಿಗಳಿಗೆ ಐಚ್ಛಿಕ ಪಠ್ಯ ವಿಷಯವಾಗಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಹೊಸ ಪೀಳಿಗೆಗೆ ಭೂತ, ವರ್ತಮಾನದ ವಿದ್ಯಮಾನಗಳನ್ನು ಕಲಾವಿದ ತನ್ನ ಬಣ್ಣದ ಗೆರೆಗಳ ಮೂಲಕ ಪರಿಚಯ ಮಾಡುತ್ತಿರುವ ಚಿತ್ರಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸಹ ಹೆಚ್ಚಿನ ಗಮನ ಹರಿಸಬೇಕಾಗಿದೆ. ನಮ್ಮ ಗಮನಕ್ಕೆ ಬರದೇ ಇರುವಂಥ ಅದೆಷ್ಟೋ ಸಂಗತಿಗಳು ಕಲಾವಿದರ ಗಮನಕ್ಕೆ ಬರುತ್ತವೆ. ತಮ್ಮ ಕಲೆಯ ಮೂಲಕ ಸಮಾಜಕ್ಕೆ ತೋರಿಸಿಕೊಡುತ್ತಾರೆ. ಅಂಥ ಶ್ರೇಷ್ಠವಾದ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಮತ್ತು ಬೆಂಬಲ ಕೊಡುವ ಉದ್ದೇಶದಿಂದ ಪರಿಷತ್ತು ಇಂಥ ಸಮ್ಮೇಳನ ಪ್ರಪ್ರಥಮ ಬಾರಿ ನಡೆಸಲಾಗುತ್ತಿದೆ. ಎಲ್ಲ ಪ್ರಕಾರದ ಸಾಹಿತ್ಯ ವಲಯಗಳು ಸೇರಿದರೆ ಮಾತ್ರೆ ಪರಿಷತ್ತು ಪರಿಪೂರ್ಣತೆಯಿಂದ ಕೂಡಿರುತ್ತದೆ ಎಂಬ ಭಾವನೆ ಪರಿಷತ್ ದ್ದಾಗಿದೆ ಎಂದರು.
ಡಾ.ಶಾಂತಲಾ ನಿಷ್ಠಿ ಅವರು ದೃಶ್ಯಕಲಾ ಸಿರಿ, ದೃಶ್ಯಕಲಾ ದೀಪ್ತಿ ಕೃತಿಗಳು ಹಾಗೂ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು.
ದಿ ಆರ್ಟ್ ಇಂಟಿಗ್ರೇಷನ್ ಫೈನ್ ಆರ್ಟ್ ಕಾಲೇಜಿನ ಪ್ರಿನ್ಸಿಪಾಲ್ ಎಂ.ಎಚ್.ಬೆಳಮಗಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಡಾ.ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂ, ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ ವೇದಿಕೆಯಲ್ಲಿದ್ದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಾನಂದ ಭಂಟನೂರ, ಡಾ.ಮೋಹನರಾವ ಪಂಚಾಳ ಮಾತನಾಡಿದರು. ಹಿರಿಯ ಚಿತ್ರಕಲಾವಿದ ಡಾ.ಎ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಸವರಜ ಉಪ್ಪಿನ್, ಶಿವಾನಂದ ಕೊಪ್ಪದ, ಮಂಜುಳಾ ಜಾನೆ, ರಾಜಶೇಖರ ಶಾಮಣ್ಣ, ರಮೇಸ ಡಿ ಬಡಿಗೇರ ವೇದಿಕೆ ಮೇಲಿದ್ದರು. ಹಿರಿಯ ಕವಿ ಡಾ.ಸ್ವಾಮಿರಾವ ಕುಲಕರ್ಣಿ, ಶಕುಂತಲಾ ಪಾಟೀಲ, ಸಂತೋಷಕುಮಾರ ಕರಹರಿ, ಡಾ. ಪರ್ವೀನ್ ಸುಲ್ತಾನಾ ಅವರ ಕವನಗಳಿಗೆ ಶ್ರೀಧರ ಹೊಸಮನಿ ಅವರು ರಾಗ ಸಂಯೋಜನೆ ಮಾಡಿದರು. ನಾಗರಾಜ ಕುಲಕರ್ಣಿ, ಬಿ.ಎನ್. ಪಾಟೀಲ, ಕವಿತಾ ಕಟ್ಟೆ, ಸೂರ್ಯಕಾಂತ ನಂದೂರ, ರಜನಿ ತಳವಾರ ಅವರು ಸ್ಥಳದಲ್ಲೇ ಚಿತ್ರ ಬಿಡಿಸಿದರು.
ದೃಶ್ಯಕಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಎಸ್.ಸಿ.ಪಾಟೀಲ ಅವರ ಸಾಂಸ್ಕೃತಿಕ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಕನ್ನಡ ಭವನದವರೆಗೆ ಜರುಗಿತು.