ಕಲಬುರಗಿ | ದೇವದಾಸಿ ಅನಿಷ್ಟ ಪದ್ದತಿ ತಡೆ ಕುರಿತು ಬೀದಿ ನಾಟಕ ಕಲಾ ಪ್ರದರ್ಶನ

ಕಲಬುರಗಿ : ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ ಕಲಬುರಗಿ ಹಾಗೂ ಶ್ರೀ ಸಾಯಿ ಜನಜಾಗೃತಿ ಕಲಾ ಸಂಘ ಆಳಂದ ಇವರ ಸಂಯುಕ್ತಾಶ್ರಯದಲ್ಲಿ ದೇವದಾಸಿ ಅನಿಷ್ಠ ಪದ್ಧತಿ ಮತ್ತು ಇದರ ದುಷ್ಪರಿಣಾಮಗಳ ಕುರಿತು ಜನ ಜಾಗೃತಿ ಮೂಡಿಸಲು ಬೀದಿ ನಾಟಕ ಕಲಾ ಪ್ರದರ್ಶನಕ್ಕೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಲಾಯಿತು.
ಬೀದಿ ನಾಟಕ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಅಭಿವೃದ್ಧಿ ನಿರೀಕ್ಷಕರು ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಟಿ.ಎನ್.ಶಾಂತಲಾ ಅವರು, ಕಲಾ ಪ್ರದರ್ಶನದ ಮೂಲಕ ಸಮಾಜಕ್ಕೆ ಮಾರಕವಾದ ದೇವದಾಸಿ ಅನಿಷ್ಟ ಪದ್ದತಿ ತಡೆಯಬೇಕು.
ಒಂದು ಹೆಣ್ಣಿಗೆ ಮುತ್ತು ಕಟ್ಟಿ ದೇವದಾಸಿಯನ್ನಾಗಿ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇದನ್ನು ಪ್ರೋತ್ಸಾಹಿಸಿದವರಿಗೆ ಮತ್ತು ಭಾಗಿಯಾಗಿದವರಿಗೆ 5 ವರ್ಷ ಶಿಕ್ಷೆ ಮತ್ತು 20,000 ರೂ. ರವರೆಗೆ ದಂಡ ವಿಧಿಸಲಾಗುತ್ತದೆ ಎಂದು ಬೀದಿ ನಾಟಕದ ಮೂಲಕ ಜನರಲ್ಲಿ ಅರಿವನ್ನು ಮೂಡಿಸಲಾಯಿತು. ಕಲಬುರಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮಸ ದೇವದಾಸಿ ಪುನರ್ವಸತಿ ಯೋಜನೆ ವತಿಯಿಂದ ಬೀದಿ ನಾಟಕ ಕಲಾ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಯಾಣರಾವ್ ಕೋರೆ, ಜಾತ್ರಾ ಕಮೀಟಿ ಅಧ್ಯಕ್ಷ ಬಸವರಾಜ ಪಾಟೀಲ್ ಮತ್ತು ಸಿದ್ದಯ್ಯ ಸ್ವಾಮಿ, ಬಾಬುರಾವ್ ಅದರಿ, ಯಶ್ವಂತ ಪೂಜಾರಿ, ರಮೇಶ ಪುಲಾರಿ, ಯಲ್ಲಪ್ಪ ಪುಜಾರಿ ಮತ್ತು ಯೋಜನಾ ಅನುಷ್ಟಾನಾಧಿಕಾರಿ ಬಸವರಾಜ ನಿಂಬರ್ಗಿಕರ್ ಉಪಸ್ಥಿತರಿದ್ದರು.