ಕಲಬುರಗಿ | ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನ : ಪ್ರಕರಣ ದಾಖಲು
ಕಲಬುರಗಿ : ತನ್ನ ಪತ್ನಿಯನ್ನು ಆಕೆಯ ತವರು ಮನೆಯಿಂದ ಕರೆ ತರುವಂತೆ ಒತ್ತಾಯಿಸಿ, ಪೊಲೀಸ್ ಠಾಣೆಯೊಂದರಲ್ಲಿ ಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಚಿಂಚೋಳಿ ತಾಲ್ಲೂಕಿನ ಚಿಂತಕುಂಟಾ ಗ್ರಾಮದ ನಿವಾಸಿ ಶಿವಕುಮಾರ ಅಮೃತ ಕಟ್ಟಿಮನಿ (28) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ. ಶಿವಕುಮಾರ ಅವರು ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕೃತ್ಯಕ್ಕೆ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಚಾಲಕನಾದ ಶಿವಕುಮಾರ ಮದ್ಯ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ಬಂದಿದ್ದ. ತನ್ನ ಹೆಂಡತಿ ಯಲಕಪಳ್ಳಿಯ ತನ್ನ ತವರು ಮನೆಗೆ ಹೋಗಿದ್ದಾಳೆ. ಅವಳನ್ನು ಕರೆ ತಂದು ನನ್ನ ಜೊತೆಗೆ ಕಳುಹಿಸಬೇಕು ಎಂದು ಹೆಡ್ ಕಾನ್ಸ್ ಸ್ಟೆಬಲ್ ಸುರೇಶ್ ಅವರಿಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ, ಬಳಿಕ ಅವರ ಮಾತಿಗೆ ಒಪ್ಪಿದ ಸಿಬ್ಬಂದಿ ಸುರೇಶ್, ಹೆಂಡತಿಯ ಹೆಸರು, ಆಕೆಯ ವಿಳಾಸ ಕೇಳಿ ದೂರಿನ ಅರ್ಜಿ ಬರೆದುಕೊಳ್ಳಲು ಮುಂದಾಗಿದ್ದಾರೆ. ಬಾಯಾರಿಕೆ ಆಗುತ್ತದೆ ಎಂದು ನೆಪವೊಡ್ಡಿದ ಶಿವಕುಮಾರ, ಠಾಣೆಯಲ್ಲಿದ್ದ ನೀರನ್ನು ಗ್ಲಾಸ್ ನಲ್ಲಿ ತುಂಬಿಕೊಂಡು ನನ್ನ ಹೆಂಡತಿಯನ್ನು ನೀವು ಕರೆಸದೆ ಇದ್ದರೇ ಇಲ್ಲಿಯೇ ಸತ್ತು ಹೋಗುತ್ತೇನೆ ಎಂದು ಜೇಬಿನಲ್ಲಿ ಇರಿಸಿದ್ದ ಮಾತ್ರೆಗಳನ್ನು ಬಾಯಿಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಆತನನ್ನು ಅಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ, ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಶಿವಕುಮಾರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.