ಕೆಂಪೇಗೌಡರು ನಿರ್ದಿಷ್ಟ ಜಾತಿಗೆ ಸೀಮಿತರಾಗದಿರಲಿ

Update: 2024-06-28 05:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿಯೊಬ್ಬರು ‘ತನ್ನ ಜಾತಿಗೆ ಸೇರಿದ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿಸುವುದಕ್ಕಾಗಿ’ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಸಲಹೆ ನೀಡಿದ ಘಟನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ‘‘ಈಗಾಗಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿದ್ದು, ಇನ್ನು ಮುಂದೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕು’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದ ವೇದಿಕೆಯಲ್ಲೇ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಆಗ್ರಹಿಸಿರುವುದು, ಕಾಂಗ್ರೆಸ್‌ನೊಳಗೆ ಮತ್ತೆ ಮುಖ್ಯಮಂತ್ರಿ ಕುರ್ಚಿಗಾಗಿ ಜಿದ್ದಾಜಿದ್ದಿ ಶುರುವಾಗಿದೆಯೇ ಎಂದು ಅನುಮಾನಿಸುವಂತಾಗಿದೆ. ಇತ್ತೀಚೆಗೆ ಕೆಲವು ಸಚಿವರು ‘ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕವಾಗಲಿ’ ಎಂಬ ಬೇಡಿಕೆಗಳನ್ನು ಮಾಧ್ಯಮದ ಮೂಲಕ ಮುಂದಿಟ್ಟಿದ್ದರು. ಇದರ ಬೆನ್ನಿಗೇ ಒಕ್ಕಲಿಗ ಸ್ವಾಮೀಜಿಯೊಬ್ಬರು ಮುಖ್ಯಮಂತ್ರಿಯ ಮುಂದೆಯೇ ಇಂತಹದೊಂದು ಬೇಡಿಕೆಯಿಟ್ಟಿರುವುದು ವಿರೋಧ ಪಕ್ಷದ ನಾಯಕರಿಗೆ ಟೀಕೆ ಮಾಡಲು ಒಂದಿಷ್ಟು ಆಹಾರವನ್ನು ಒದಗಿಸಿಕೊಟ್ಟಿದೆ. ಇದರ ಜೊತೆಗೇ ಸ್ವಾಮೀಜಿಯ ವರ್ತನೆಯನ್ನು ಹಲವರು ಖಂಡಿಸಿದ್ದಾರೆ. ‘ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಸ್ವಾಮೀಜಿಗಳು ಮಾತನಾಡುವುದು ಎಷ್ಟು ಸರಿ?’ ಎಂಬ ಪ್ರಶ್ನೆಯನ್ನು ಹಲವು ಸಚಿವರು ಕೇಳಿದ್ದಾರೆ. ‘‘ರಾಜಕಾರಣಿಗಳು ಕೇಳಿದರೆ ಸ್ವಾಮೀಜಿಗಳು ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಾರೆಯೆ? ಹಾಗೆಯೇ ಸ್ವಾಮೀಜಿ ಹೇಳಿದರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಇನ್ನೊಬ್ಬರಿಗೆ ನೀಡಲಾಗುತ್ತದೆಯೆ?’’ ಎಂಬ ಪ್ರಶ್ನೆಯನ್ನು ಸಚಿವ ಕೆ. ಎನ್. ರಾಜಣ್ಣ ಕೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಸ್ವಾಮೀಜಿಯ ವೈಯಕ್ತಿಕ ಆಗ್ರಹವೋ, ಇದರ ಹಿಂದೆ ಡಿ.ಕೆ. ಶಿವಕುಮಾರ್ ಬಣದ ಕೈವಾಡವಿದೆಯೋ ಎನ್ನುವ ಪ್ರಶ್ನೆಯೂ ಎದ್ದಿದೆ.

ಸ್ವಾಮೀಜಿಗಳನ್ನು, ಧಾರ್ಮಿಕ ವ್ಯಕ್ತಿಗಳನ್ನು ಬಗಲಲ್ಲಿ ಕಟ್ಟಿಕೊಂಡು ಓಡಾಡಿದರೆ ರಾಜಕೀಯ ನಾಯಕರು ಇಂತಹದೊಂದು ಮುಜುಗರ ಎದುರಿಸಲೇ ಬೇಕಾಗುತ್ತದೆ. ಕೆಂಪೇಗೌಡರು ಬೆಂಗಳೂರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಸಲ್ಲುವವರು. ಬೆಂಗಳೂರು ನಗರವನ್ನು ಕಟ್ಟಿದವರೆಂಬ ಹೆಗ್ಗಳಿಕೆಯೂ ಅವರಿಗಿದೆ. ಅವರು ಒಂದು ನಿರ್ದಿಷ್ಟ ಜಾತಿ, ಧರ್ಮಕ್ಕೆ ಸೇರಿದವರಲ್ಲ. ಕೆಂಪೇಗೌಡರ ಸ್ಮರಣೆ, ಬೆಂಗಳೂರಿನ ದೂರಗಾಮಿ ಅಭಿವೃದ್ಧಿಗೆ ಒಂದು ನೆಪವಾಗಬೇಕು. ಆದರೆ ಇಂದು ಕೆಂಪೇಗೌಡರನ್ನು ಒಂದು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸುವ ಪ್ರಯತ್ನವನ್ನು ಎಲ್ಲ ಪಕ್ಷಗಳ ರಾಜಕೀಯ ನಾಯಕರೂ ಮಾಡುತ್ತಾ ಬರುತ್ತಿದ್ದಾರೆ. ಒಂದು ನಿರ್ದಿಷ್ಟ ಜಾತಿಯನ್ನು ಒಲಿಸಿಕೊಳ್ಳುವ ಕಾರಣಕ್ಕಾಗಿ ಅವರು ಕೇಂಪೇಗೌಡರ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದರಿಂದ ಕೆಂಪೇಗೌಡರ ಇತಿಹಾಸಕ್ಕೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚು. ಬಿಬಿಎಂಪಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಕೆಂಪೇಗೌಡರ ಸ್ಮರಣೆ ಕಾರ್ಯಕ್ರಮಕ್ಕೆ ಒಬ್ಬ ಇತಿಹಾಸ ತಜ್ಞನನ್ನೋ, ಸಂಶೋಧಕನನ್ನೋ, ಹಿರಿಯ ವಿದ್ವಾಂಸರನ್ನೋ ಅತಿಥಿಯಾಗಿ ಮಾಡಿದ್ದಿದ್ದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿ ಇಂತಹದೊಂದು ಮುಜುಗರವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಕೆಂಪೇಗೌಡರನ್ನು ಸ್ಮರಿಸುವ ವೇದಿಕೆಯನ್ನು ಸ್ವಾಮೀಜಿಯೊಬ್ಬರು ತಮ್ಮ ಜಾತಿ ರಾಜಕಾರಣಕ್ಕೆ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಏಕಕಾಲದಲ್ಲಿ ತಾನು ಧರಿಸಿರುವ ಖಾವಿ ಬಟ್ಟೆಗೂ, ಕೆಂಪೇಗೌಡರಿಗೂ ಕಳಂಕ ತಂದಿದ್ದಾರೆ. ಯಾರು ಮುಖ್ಯಮಂತ್ರಿಯಾಗಬೇಕು, ಯಾರು ಆಗಬಾರದು ಎನ್ನುವುದನ್ನು ನಿರ್ಧರಿಸುವವರು ಈ ನಾಡಿನ ಜನತೆಯೇ ಹೊರತು, ಒಂದು ನಿರ್ದಿಷ್ಟ ಸಮುದಾಯದ ಸ್ವಾಮೀಜಿಯಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರುವುದು ಕೇವಲ ಒಂದು ಜಾತಿಯ ಜನರಲ್ಲ. ಈ ನಾಡಿನ ಎಲ್ಲ ಶೋಷಿತ ಸಮುದಾಯಗಳು ಜೊತೆ ನಿಂತು ಅವರು ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡಿದ್ದಾರೆ. ಇವೆಲ್ಲದರ ನಡುವೆಯೂ ಒಬ್ಬನನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸ್ವಾಮೀಜಿಯೊಬ್ಬರು ಒತ್ತಾಯಿಸುವುದಿದ್ದರೆ ಅದರ ಹಿಂದೆ, ಸರ್ವಜನರ ಹಿತಾಸಕ್ತಿ ಇರಬೇಕು. ಸಾಮಾಜಿಕ ನ್ಯಾಯ ನೀಡುವ ದೂರದ ಉದ್ದೇಶವಿರಬೇಕು. ಆದರೆ ಸ್ವಾಮೀಜಿಯ ಆಗ್ರಹದಲ್ಲಿ ದುರುದ್ದೇಶ ಮಾತ್ರ ಇದೆ. ಈಗಾಗಲೇ ಕಾಂಗ್ರೆಸ್‌ನೊಳಗೆ ನಡೆಯುತ್ತಿರುವ ಅಧಿಕಾರದ ಹಗ್ಗಜಗ್ಗಾಟದಲ್ಲಿ ಸ್ವಾಮೀಜಿಯನ್ನು ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿ ಮರುಕಳಿಸದೇ ಇರಬೇಕಾದರೆ ಮುಂದಿನ ದಿನಗಳಲ್ಲಿ ಸರಕಾರ ಹಮ್ಮಿಕೊಳ್ಳುವ ಕೆಂಪೇಗೌಡರು ಅಥವಾ ಇನ್ನಾವುದೇ ಐತಿಹಾಸಿಕ ನಾಯಕರ ಸ್ಮರಣೆಯಲ್ಲಿ ಅನಗತ್ಯವಾಗಿ ಸ್ವಾಮೀಜಿಗಳನ್ನು ತಂದು ಕೂರಿಸುವ ಸಂಪ್ರದಾಯ ನಿಲ್ಲಬೇಕು.

ಕೆಂಪೇಗೌಡರನ್ನು ಒಕ್ಕಲಿಗ ಜಾತಿಗೆ ಸೀಮಿತಗೊಳಿಸಿದಂತೆಯೇ, ಟಿಪ್ಪು ಸುಲ್ತಾನರನ್ನು ಮುಸ್ಲಿಮ್ ಧರ್ಮೀಯರಿಗೆ ಸೀಮಿತವಾಗಿಸುವ ರಾಜಕಾರಣಿಗಳ ಪ್ರಯತ್ನ ಎಂತಹ ಅನಾಹುತಕ್ಕೆಲ್ಲ ಕಾರಣವಾಯಿತು ಎನ್ನುವುದನ್ನು ಸರಕಾರ ಮತ್ತೊಮ್ಮೆ ನೆನೆದುಕೊಳ್ಳಬೇಕು. ಟಿಪ್ಪು ಸುಲ್ತಾನ್ ಎಂದಿಗೂ ತಮ್ಮ ಧರ್ಮವನ್ನು ಪ್ರತಿನಿಧಿಸುವ ನಾಯಕ ಎಂದು ನಾಡಿನ ಮುಸ್ಲಿಮರು ಭಾವಿಸಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಈತ ನಡೆಸಿದ ಅಪ್ರತಿಮ ಹೋರಾಟ, ಅಂದಿನ ತನ್ನ ಆಡಳಿತದಲ್ಲಿ ಆತ ಮಾಡಿದ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿ, ಮೆರೆದ ಮುತ್ಸದ್ದಿತನ ಇವೆಲ್ಲದರ ಕಾರಣಕ್ಕಾಗಿ ಟಿಪ್ಪು ಸುಲ್ತಾನ್‌ರನ್ನು ಇಡೀ ವಿಶ್ವವೇ ಸ್ಮರಿಸುತ್ತಿದೆ. ಅಮೆರಿಕದಲ್ಲಿ ಕ್ರಾಂತಿ ನಡೆದಾಗ ಅಲ್ಲಿನ ಕ್ರಾಂತಿಕಾರರು ಹೈದರಾಲಿ ಮತ್ತು ಟಿಪ್ಪುಸುಲ್ತಾನರನ್ನು ನೆನೆದುಕೊಂಡಿದ್ದರು. ಟಿಪ್ಪು ಸುಲ್ತಾನ್ ರಾಕೆಟ್‌ನಲ್ಲಿ ಮಾಡಿದ ಪ್ರಯೋಗವನ್ನು ನಾಸಾ ಇಂದಿಗೂ ನೆನೆದುಕೊಳ್ಳುತ್ತದೆ. ಆದರೆ ಕರ್ನಾಟಕದ ರಾಜಕಾರಣಿಗಳು ಆತನನ್ನು ಒಂದು ನಿರ್ದಿಷ್ಟ ಧರ್ಮದ ಜನರನ್ನು ಒಲಿಸಿಕೊಳ್ಳಲು ಬಳಸಿಕೊಂಡರು. ಇಂದು ವಿಶ್ವ ಹೆಮ್ಮೆ ಪಡುವ ರಾಜಕೀಯ ನಾಯಕರನ್ನು ಕೋಮು ದ್ವೇಷದ ಹಿನ್ನೆಲೆಯಲ್ಲಿ ಕರ್ನಾಟಕದ ಕೆಲವು ರಾಜಕೀಯ ನಾಯಕರೇ ಸಂಕುಚಿತಗೊಳಿಸಲು ಯತ್ನಿಸುತ್ತಿದ್ದಾರೆ. ಟಿಪ್ಪು ಬಾಳಿದ ನಾಡು ಎಂದು ಹೆಮ್ಮೆ ಪಟ್ಟುಕೊಳ್ಳಬೇಕಾದ ಕರ್ನಾಟಕ, ಕೀಳರಿಮೆಯಿಂದ ನರಳಬೇಕಾದ ಸ್ಥಿತಿಯನ್ನು ರಾಜಕಾರಣಿಗಳೇ ತಂದಿಟ್ಟಿದ್ದಾರೆ. ಟಿಪ್ಪುವಿಗೆ ಒದಗಿದ ಸ್ಥಿತಿ ಯಾವ ಕಾರಣಕ್ಕೂ ಕೆಂಪೇಗೌಡರಿಗೂ ಒದಗಬಾರದು. ಆದುದರಿಂದ ಕೆಂಪೇಗೌಡರನ್ನು ಸ್ಮರಿಸುವ ಸಾಂಸ್ಕೃತಿಕ ಕಾರ್ಯಕ್ರಮದಿಂದ ಇಂತಹ ಜಾತಿ ಸ್ವಾಮೀಜಿಗಳನ್ನು ಆದಷ್ಟು ದೂರವಿಡುವುದು ಇತಿಹಾಸಕ್ಕೂ ವರ್ತಮಾನಕ್ಕೂ ಹೆಚ್ಚು ಕ್ಷೇಮ.

ಇತ್ತೀಚೆಗೆ ಸಿದ್ದರಾಮಯ್ಯರು ಬಕ್ರೀದ್ ದಿನ ಮಸೀದಿಯೊಂದರಲ್ಲಿ ಟೋಪಿ, ಹಸಿರು ಶಾಲು ಧರಿಸಿ ಕಾಣಿಸಿಕೊಂಡಿದ್ದರು. ಈ ಭಂಗಿಯಲ್ಲಿರುವ ಚಿತ್ರಗಳು ಕೆಲವು ಪತ್ರಿಕೆಗಳಲ್ಲೂ ಪ್ರಕಟವಾಗಿದ್ದವು. ಈ ಚಿತ್ರವನ್ನೇ ಮುಂದಿಟ್ಟುಕೊಂಡು ಕೆಲವು ರಾಜಕಾರಣಿಗಳು ‘ಮುಖ್ಯಮಂತ್ರಿ ಮುಸ್ಲಿಮರನ್ನು ತುಷ್ಟೀಕರಿಸುತ್ತಿದ್ದಾರೆ’ ಎಂದು ಟೀಕಿಸುತ್ತಾರೆ. ಆದರೆ ಬಕ್ರೀದ್ ದಿನ ಮಸೀದಿಯಲ್ಲಿ ಮುಖ್ಯಮಂತ್ರಿ ಟೋಪಿ ಧರಿಸಿ, ಶಾಲುಹೊದ್ದು ನಿಲ್ಲಬೇಕು ಎನ್ನುವುದು ಈ ನಾಡಿನ ಮುಸ್ಲಿಮ್ ಸಮುದಾಯದ ಅಗತ್ಯ ಖಂಡಿತ ಅಲ್ಲ. ಮುಸ್ಲಿಮ್ ಸಮುದಾಯದ ಮೂಲಭೂತ ಬೇಡಿಕೆಗಳನ್ನು ನಿರ್ಲಕ್ಷಿಸಿ, ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಾಗಿ ಸಿಗಬೇಕಾದ ಪ್ರಾತಿನಿಧ್ಯಗಳಿಂದ ವಂಚಿಸಿ ವರ್ಷಕ್ಕೊಮ್ಮೆ ಮಸೀದಿಯಲ್ಲಿ ಹೀಗೆ ಟೋಪಿ ಧರಿಸಿ ನಿಂತರೆ ಮುಸ್ಲಿಮರ ಬದುಕಿನಲ್ಲಿ ಯಾವ ಬದಲಾವಣೆಯಾದಂತಾಯಿತು? ಕೆಂಪೇಗೌಡರು ಅಥವಾ ಟಿಪ್ಪು ಸುಲ್ತಾನ್‌ರನ್ನು ಈ ನಾಡಿನ ಅಸ್ಮಿತೆಯಾಗಿ ಸರಕಾರ ಗೌರವಿಸಬೇಕೇ ಹೊರತು, ಅವರು ಒಂದು ಜಾತಿ, ಧರ್ಮವನ್ನು ಪ್ರತಿನಿಧಿಸುತ್ತಾರೆ ಎನ್ನುವ ಕಾರಣಕ್ಕಾಗಿ ಅಲ್ಲ. ಅಂತಹ ಗೌರವದಿಂದ ಆ ಸಮುದಾಯಗಳಿಗೆ ಯಾವ ಲಾಭವೂ ಇಲ್ಲ. ರಾಜಕೀಯವಾಗಿ, ಆರ್ಥಿಕವಾಗಿ ಸಬಲೀಕರಣಗೊಂಡಿರುವ ಜಾತಿ, ಸಮುದಾಯಗಳ ಪರವಾಗಿ ಸ್ವಾಮೀಜಿಗಳು ಮಾತನಾಡುವ ಬದಲು ಶೋಷಿತ ಜಾತಿ, ಸಮುದಾಯದ ಜನರ ಪರವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಲಿ. ಶೋಷಿತ ಸಮುದಾಯದಿಂದ ಬಂದ ನಾಯಕರಿಗೆ ಅರ್ಹ ಸ್ಥಾನ ಸಿಗಬೇಕು ಎಂದು ರಾಜಕೀಯ ನಾಯಕರನ್ನು ಒತ್ತಾಯಿಸಲಿ. ಆ ಮೂಲಕ ಮಾತ್ರ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವಾಗಿ ಪರಿವರ್ತಿಸಲು ಸಾಧ್ಯ. ಅಂತಹ ಆಗ್ರಹಗಳ ಮೂಲಕ ಸ್ವಾಮೀಜಿಗಳೂ ತಾವು ಧರಿಸಿದ ಬಟ್ಟೆಯ ಘನತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News