ಕೋಮುವಾದಿಗಳ ಜತೆ ಜೆಡಿಎಸ್ ಕೈಜೋಡಿಸಿರುವುದು ದುರಂತ: ಶ್ರಮಜೀವಿಗಳ ಸಮಾವೇಶದಲ್ಲಿ ಬೃಂದಾ ಕಾರಟ್ ಆತಂಕ

Update: 2024-03-03 18:30 GMT

ಮಂಡ್ಯ: ಜಾತ್ಯತೀತ ತತ್ವಗಳಿಗೆ ಹೆಸರಾಗಿದ್ದ, ಜಾತ್ಯತೀತ ಪರಂಪರೆಯನ್ನು ಎತ್ತಿ ಹಿಡಿದಿದ್ದ ದೇವೇಗೌಡರ ಜೆಡಿಎಸ್ ಪಕ್ಷ ಇಂದು ಕೋಮುವಾದಿಗಳ ಜತೆ ಕೈಜೋಡಿಸಿರುವುದು ಈ ನಾಡಿನ ದುರಂತ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಎಂ)ದ ಜಿಲ್ಲಾ ಸಮಿತಿ ವತಿಯಿಂದ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ದುಡಿಮೆ ಸಂಸ್ಕೃತಿಯ ಉಳಿವಿಗಾಗಿ, ಶಾಂತಿ, ಸೌಹಾರ್ದತೆ, ಸಹಬಾಳ್ವೆಗಾಗಿ ರವಿವಾರ ಏರ್ಪಡಿಸಿದ್ದ ಶ್ರಮಜೀವಿಗಳ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನವನ್ನು ಉಲ್ಲಂಘಿಸಿ ಜಿಲ್ಲೆಯ ಕೆರಗೋಡು ಗ್ರಾಮದ ಸರಕಾರಿ ಜಾಗದಲ್ಲಿ ಹನುಮಧ್ವಜ ಹಾರಿಸಿದ ಸಂಘಪರಿವಾರದವರ ಜತೆ ಕೇಸರಿಶಾಲು ಹಾಕಿಕೊಂಡು ಪ್ರತಿಭಟನೆ ನಡೆಸಿದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು ಎಂದು ಅವರು ಕಿಡಿಕಾರಿದರು.

ವ್ಯಯಕ್ತಿವಾಗಿ ಯಾವುದೇ ಧರ್ಮ ಆಚರಣೆಗೆ ಸಂವಿಧಾನದಲ್ಲಿ ಅವಕಾಶ ಇದೆ. ಆದರೆ, ಸರಕಾರಿ ಸ್ಥಳದಲ್ಲಿ ರಾಷ್ಟ್ರಧ್ವಜ ಹೊರತುಪಡಿಸಿ ಇತರೆ ಧ್ವಜಗಳು ಹಾರಾಡುವಂತಿಲ್ಲ. ಇಂತಿದ್ದರೂ ಕೆರಗೋಡು ಗ್ರಾಮದ ಸರಕಾರಿ ಜಾಗದಲ್ಲಿ ಧಾರ್ಮಿಕ ಧ್ವಜವನ್ನು ಅವರೋಹಣ ಮಾಡುವ ಹಕ್ಕನ್ನು ಸಂಘಪರಿವಾರದವರಿಗೆ ಕೊಟ್ಟವರು ಯಾರು? ಎಂದು ಅವರು ಪ್ರಶ್ನಿಸಿದರು.

ಬಹುಸಂಸ್ಕೃತಿಯ ನೆಲೆವೀಡಾದ ಹಳೇ ಮೈಸೂರು ಪ್ರಾಂತ್ಯದ ಶಾಂತಿ, ಸೌಹಾರ್ದತೆ ಭಂಗ ತರಲು ಸಂಘಪರಿವಾರ, ಬಿಜೆಪಿ ಹೊಸ ಹೊಸ ಹಾದಿ ಹುಡುಕುತ್ತಿವೆ. ಆದರೆ, ಮಂಡ್ಯ ಜಿಲ್ಲೆಯ ಜನರು ಕರೆಗೋಡಿನಲ್ಲಿ ಧಾರ್ಮಿಕ ಧ್ವಜವನ್ನು ಕೆಳಗಿಸಿ ರಾಷ್ಟ್ರಧ್ವಜ ಏರಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು.

ಟಿಪ್ಪು ಸುಲ್ತಾನ್ ದಕ್ಷ ಆಡಳಿತಗಾರನಾಗಿದ್ದ. ಮಹಿಳೆಯರು, ರೈತರು, ದುರ್ಬಲವರ್ಗದವರ ದನಿಯಾಗಿದ್ದ. ಪ್ರಗತಿಪರವಾದ ಸುಧಾರಣೆಗಳನ್ನು ಜಾರಿಗೊಳಿಸಿದ. ಒಬ್ಬ ರಾಜನಾಗಿ ಕೆಲವು ದೌರ್ಬಲ್ಯಗಳೂ ಇರಬಹುದು. ಅದನ್ನು ಸರಿಯಾಗಿ ಪರಾಮರ್ಶಿಸದೆ ಬಿಜೆಪಿ, ಸಂಘಪರಿವಾರದವರು ಇತಿಹಾಸವನ್ನು ತಿರುಚುವ, ಪುನರ್ ರೂಪಸುವ ಯತ್ನ ನಡೆಸುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.

ನರೇಂದ್ರ ಮೋದಿ ಸರಕಾರವು ದೇವರು, ಧರ್ಮದ ಹೆಸರಿನಲ್ಲಿ ದೇಶದ ಜನಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಿದೆ. ತನ್ನದು ಮಹಿಳಾಪರ, ರೈತಪರ, ಶ್ರಮಿಕರಪರ ಸರಕಾರವೆಂದು ಹೇಳಿಕೊಂಡು ಎಲ್ಲಾ ಅನುದಾನವನ್ನು ಉದ್ಯಮಗಳಿಗೆ ಧಾರೆ ಎರೆಯುತ್ತಿದೆ ಎಂದು ಬೃಂದಾ ಕಾರಟ್ ವಾಗ್ದಾಳಿ ನಡೆಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಮೀನಾಕ್ಷಿ ಸುಂದರಂ, ಕೆ.ಎಸ್.ವಿಮಲ, ಎಂ.ಪುಟ್ಟಮಾದು, ಸಿ.ಕುಮಾರಿ, ದೇವಿ, ಎನ್.ಎಲ್. ಭರತ್‍ರಾಜ್, ಜಿ.ರಾಮಕೃಷ್ಣ, ಎನ್.ಸುರೇಂದ್ರ, ಸುಶೀಲಾ ಬಿ.ಹನುಸಮೇಶ್, ದಸಂಸರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಚಿಂತಕ ಪ್ರೊ.ಇಲ್ಯಾಸ್ ಅಹ್ಮದ್‍ಖಾನ್, ತಿಮ್ಮೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

“ಕೇಂದ್ರದ ಈ ಹತ್ತು ವರ್ಷದ ಆಡಳಿತದಲ್ಲಿ ದೇಶದ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಜನಸಾಮಾನ್ಯರು ಭಯ, ಆತಂಕ, ಅಭದ್ರತೆಯನ್ನು ಅನುಭವಿಸುತ್ತಿದ್ದಾರೆ. ಸಾಮರಸ್ಯಕ್ಕೆ ಬೆಂಕಿ ಬೀಳುತ್ತಿದೆ. ಹಸಿರು ತೋರಣದ ಜಾಗದಲ್ಲಿ ಕೇಸರಿ ಬಾವುಟ, ಭಿತ್ತಿಚಿತ್ರ ರಾರಾಜಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮೋದಿ ಸರಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ, ಉದ್ಯೋಗ ಖಾತ್ರಿ ಮಾತ್ರವಲ್ಲ ಮಕ್ಕಳಿಗೆ ಶಿಕ್ಷಣವೂ ಸಿಗುವುದಿಲ್ಲ. ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ.”

-ಗುರುಪ್ರಸಾದ್ ಕೆರಗೋಡು, ದಸಂಸ ರಾಜ್ಯ ಸಂಚಾಲಕ

“ಇಂದು ದೇಶದಲ್ಲಿ ಕೋಮುಶಕ್ತಿ ವಿಜೃಂಭಿಸುತ್ತಿದೆ. ಶ್ರಮಿಕರು, ರೈತರು, ಕೂಲಿಕಾರರು ಮಾತ್ರವಲ್ಲ ಜನಸಾಮಾನ್ಯರು ಆತಂಕ, ತಲ್ಲಣಗೊಂಡಿದ್ದಾರೆ. ಮೋದಿ ಸರಕಾರ ಇಳಿಸುವುದು ಇಂದಿನ ಜರೂರಾಗಿದೆ.P ಕೋಮುಶಕ್ತಿಗಳ ವಿರುದ್ಧ ಜಾತ್ಯತೀತ ಶಕ್ತಿಗಳು ಸಂಘಟಿತ ಹೋರಾಟ ನಡೆಸಬೇಕಾಗಿದೆ.”

-ಪ್ರೊ.ಇಲ್ಯಾಸ್ ಅಹ್ಮದ್‍ ಖಾನ್






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News