ವಿದ್ಯಾರ್ಥಿನಿಯರ ನಡುವಿನ ಘಟನೆಗೆ ಕ್ರಿಮಿನಲ್, ಕೋಮು ಬಣ್ಣ ಕೊಡುವ ದುಷ್ಟ ಷಡ್ಯಂತ್ರ
ಆರ್. ಜೀವಿ
ನಿರಂತರ ಕೋಮು ದ್ವೇಷ ಹಾಗು ಸುಳ್ಳು ಪ್ರಚಾರದ ಬಳಿಕವೂ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡ ಮೇಲೆ ಬಿಜೆಪಿ, ಸಂಘಪರಿವಾರ, ಬಲಪಂಥೀಯರು ಮತ್ತು ಸುಳ್ಳು ಸುದ್ದಿ ಹರಡುವ ಮಾಧ್ಯಮಗಳು ಎಷ್ಟೊಂದು ಹತಾಶಗೊಂಡಿವೆ ಅನ್ನೋದಕ್ಕೆ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯ ಬಳಿಕದ ಬೆಳವಣಿಗೆಗಳೇ ಸಾಕ್ಷಿಯಾಗಿವೆ. ಬೆರಳೆಣಿಕೆಯ ಸಹಪಾಠಿಗಳ ನಡುವೆಯೇ ನಡೆದು ಮುಗಿದು ಹೋದ ಪ್ರಕರಣವೊಂದಕ್ಕೆ ಮತ್ತೆ ದ್ವೇಷ ಹಾಗು ಹಸಿ ಹಸಿ ಸುಳ್ಳುಗಳ ಮೂಲಕ ಮರುಜೀವ ನೀಡಲಾಗಿದೆ.
ರಹಸ್ಯವಾಗಿ ಹಿಂದೂ ವಿದ್ಯಾರ್ಥಿನಿಯರ ನಗ್ನ ವಿಡಿಯೊ ಮಾಡಿ ಅದನ್ನು ಎಲ್ಲೆಡೆ ಹರಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಎನ್ನುವ ಹಸಿ ಸುಳ್ಳನ್ನು ಅತ್ಯಂತ ವ್ಯವಸ್ಥಿತವಾಗಿ ಹರಡಲಾಗಿದೆ. ಈ ಸಂಬಂಧ ಯಾವುದೇ ವಿಡಿಯೋ ಅಥವಾ ಸಾಕ್ಷ್ಯ ಸಿಗದಿದ್ದರೂ, ಸಂತ್ರಸ್ತ ವಿದ್ಯಾರ್ಥಿನಿಯೇ ದೂರು ನೀಡದಿದ್ದರೂ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲಾಗಿದೆ.
ನಕಲಿ ವಿಡಿಯೊ ಸೃಷ್ಟಿಸಿ ಇದು ಉಡುಪಿ ವಿದ್ಯಾರ್ಥಿನಿಯ ವಿಡಿಯೊ ಎಂದು ಹೇಳಿ ಹೆಣ್ಣುಮಕ್ಕಳ ಮಾನ ಹರಾಜು ಹಾಕುವ ದುಷ್ಟ ಕೆಲಸವನ್ನು ಮಾಡಲಾಗುತ್ತಿದೆ. ಪರಿಣಾಮ ಟ್ವಿಟರ್ ನಲ್ಲಿ ಉಡುಪಿ ಹಾರರ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ. ಹೊತ್ತಿ ಉರಿಯುತ್ತಿರುವ ಮಣಿಪುರ ಹಾಗು ಅಲ್ಲಿ ಮಹಿಳೆಯರನ್ನು ಹಾಡಹಗಲೇ ಸಾರ್ವಜನಿಕವಾಗಿ ಬೆತ್ತಲು ಮಾಡಿ ಸಾಮೂಹಿಕ ಅತ್ಯಾಚಾರ ಮಾಡುತ್ತಿರುವ ಬಗ್ಗೆ ಪ್ರಧಾನಿಯನ್ನು ಹಾಗು ಬಿಜೆಪಿ ಸರಕಾರಗಳನ್ನು ಪ್ರಶ್ನಿಸುವ ಬೆನ್ನುಮೂಳೆ ಇಲ್ಲದ ಸೋ ಕಾಲ್ಡ್ ರಾಷ್ಟ್ರೀಯ ಚಾನಲ್ ಗಳು, ವೆಬ್ ಸೈಟ್ ಗಳು ಉಡುಪಿ ಪ್ರಕರಣದಲ್ಲಿ ಇಲ್ಲದ ಕಾಣದ ಕೈಗಳನ್ನು ಹುಡುಕುತ್ತಿವೆ.
ಮತ್ತೊಂದು ಕಡೆ ರಶ್ಮಿ ಸಾಮಂತ್ ಎನ್ನುವ ಸ್ವಘೋಷಿತ ಹಿಂದೂ ಹೋರಾಟಗಾರ್ತಿ, ಬಲಪಂಥೀಯ ಟ್ರೋಲ್ ಗಳು ಮತ್ತು ಬಿಜೆಪಿ ನಾಯಕರು ಹರಡುತ್ತಿರುವ ಹಸಿ ಹಸಿ ಸುಳ್ಳುಗಳು ಉಡುಪಿ ಎಸ್ಪಿ ಮತ್ತು ಕಾಲೇಜು ಆಡಳಿತ ಮಂಡಳಿಯವರ ಸುದ್ದಿಗೋಷ್ಟಿಯಲ್ಲಿ ಬಟಾಬಯಲಾಗಿವೆ.
ಉಡುಪಿಯ ಆ ಕಾಲೇಜಿನಲ್ಲಿ ನಡೆದದ್ದೇನು?
ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ಹೋಗಿದ್ದ ಸಂದರ್ಭ ಆಕೆಯ ಮೂವರು ಸಹಪಾಠಿಗಳು ವಿಡಿಯೊ ಮಾಡಿದ ಬಗ್ಗೆ ಆರೋಪ ಕೇಳಿಬಂದಿತ್ತು. ತನ್ನ ವಿಡಿಯೊ ಮಾಡಿದ ಬಗ್ಗೆ ವಿದ್ಯಾರ್ಥಿನಿ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಳು. ವಿಡಿಯೋ ಮಾಡಿದ್ದ ಮೂವರು ವಿದ್ಯಾರ್ಥಿನಿಯರನ್ನು ಕರೆಸಿದ್ದ ಆಡಳಿತ ಮಂಡಳಿ ಮಾಹಿತಿ ಪಡೆದು ಎಚ್ಚರಿಕೆ ನೀಡಿ ಮೂವರನ್ನೂ ಅಮಾನತುಗೊಳಿಸಿತ್ತು. ವೀಡಿಯೊವನ್ನು ಅಲ್ಲೇ ಆಗಲೇ ಡಿಲೀಟ್ ಮಾಡಲಾಗಿತ್ತು.
ಪ್ರಕರಣ ಇಷ್ಟಕ್ಕೆ ಮುಗಿದಿದೆ ಎನ್ನುವಷ್ಟರಲ್ಲೇ ಈ ಪ್ರಕರಣವನ್ನೇ ಮುಂದಿಟ್ಟು ಹೊಸದಾಗಿ ಕೋಮುದ್ವೇಷ ಸೃಷ್ಟಿಸಬಹುದು ಎನ್ನುವ ಸುಳಿವು ಸಿಕ್ಕ ಬಿಜೆಪಿ ಹಾಗು ಸಂಘಪರಿವಾರ ಪ್ರೇರಿತ ಶಕ್ತಿಗಳು ಮಧ್ಯಪ್ರವೇಶಿಸಿದವು. ಈ ಹಿಂದೆ ಉಡುಪಿಯಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ದೇಶಾದ್ಯಂತ ಅದರ ರಾಜಕೀಯ ಲಾಭ ಪಡೆದ ಹಾಗೆ ಇನ್ನೊಂದು ಅವಕಾಶ ಇಲ್ಲಿದೆ ಎಂದು ಕರ್ನಾಟಕದಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಹಾಗು ಸಂಘ ಪರಿವಾರ ಬಗೆಯಿತು.
ಅದಕ್ಕಾಗಿ ಪ್ರಕರಣಕ್ಕೆ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಪ್ರಚಾರ ನೀಡಲಾಯಿತು. ಈ ಪ್ರಕರಣದಲ್ಲೊಂದು ಹಿಂದು ಮುಸ್ಲಿಂ ಆಂಗಲ್ ತರಲಾಯಿತು. ರಾಜಕೀಯ ಲಾಭಕ್ಕಾಗಿ ಹಿಜಾಬ್ ವಿವಾದದ ರೂವಾರಿ ಎನ್ನುವ ಆರೋಪ ಹೊತ್ತಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪ್ರಚೋದನಕಾರಿ ಹೇಳಿಕೆ ನೀಡಿದರು.
"ಮುಸ್ಲಿಂ ಸಮುದಾಯದ ಹುಡುಗಿಯರಿಂದ ಜಿಲ್ಲೆಯ ಜನರು ತಲೆ ತಗ್ಗಿಸುವ ಹಾಗಾಗಿದೆ. ಈ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಶೌಚಾಲಯದಲ್ಲಿ ವಿಡಿಯೊ ಮಾಡಿ ಬೇರೆಯವರಿಗೆ ಹಂಚಿರುವುದು ಅಕ್ಷಮ್ಯ, ಬೇರೆ ರಾಜ್ಯಗಳಲ್ಲಿ ಇಂತಹ ಕೃತ್ಯ ಎಸಗಿ ಆನಂತರದ ದಿನಗಳಲ್ಲಿ ಬ್ಲಾಕ್ ಮೇಲ್ ಮಾಡಿರುವ ಘಟನೆಗಳು ನಡೆದಿವೆ. ಜಿಹಾದಿ ಸಂಘಟನೆಗಳು ಇದರ ಹಿಂದಿರುವ ಸಂಶಯ ಇದೆ " ಎಂದರು ಯಶ್ಪಾಲ್ ಸುವರ್ಣ.
ಹಿಜಾಬ್ ಪ್ರಕರಣದಂತೆಯೇ ಈ ಪ್ರಕರಣಕ್ಕೂ ರಾಷ್ಟ್ರೀಯ ಮಟ್ಟದ ಪ್ರಚಾರವೂ ಅಗತ್ಯವಿತ್ತು. ಇದಕ್ಕಾಗಿಯೇ ಉಡುಪಿ ಮೂಲದ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರ ಸಲಹಾ ಸಮಿತಿಯ ಸದಸ್ಯರಾಗಿದ್ದ ರಶ್ಮಿ ಸಾಮಂತ್ ಎಂಬಾಕೆ ಸರಣಿ ಟ್ವೀಟ್ ಗಳನ್ನ ಮಾಡಿದರು. ಈ ಟ್ವೀಟ್ ಗಳಲ್ಲಿ ನೇರವಾಗಿ ಯಾವುದೇ ಪೊಲೀಸ್ ತನಿಖೆ ನಡೆಯುವುದಕ್ಕೆ ಮುಂಚಿತವಾಗಿಯೇ ಇದೇ ಸತ್ಯ ಎಂದು ಘೋಷಿಸಲ್ಪಟ್ಟಂತಹ ಹಸಿ ಹಸಿ ದ್ವೇಷಪೂರಿತ ಸುಳ್ಳುಗಳಿದ್ದವು.
‘‘ನಾನು ಉಡುಪಿಯವಳು. ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಹಿಂದು ಹೆಣ್ಮಕ್ಕಳ ವಿಡಿಯೊ ಮಾಡಿದ ಅಲೀಮತುಲ್ ಶೈಫಾ, ಶಬನಾಝ್ ಮತ್ತು ಆಲಿಯಾ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ. ಹೆಣ್ಮಕ್ಕಳ ಫೋಟೊ, ವಿಡಿಯೊಗಳನ್ನು ನಂತರ ವಾಟ್ಸಾಪ್ ಕಮ್ಯುನಿಟಿ ಗ್ರೂಪ್ ಗಳಲ್ಲಿ ಹಂಚಲಾಗಿದೆ. ವೀಡಿಯೊಗಳಲ್ಲಿರುವ ನೂರಾರು ಅಮಾಯಕ ಹಿಂದೂ ಹುಡುಗಿಯರು ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದಾರೆ " ಎಂದು ರಶ್ಮಿ ಸಾವಂತ್ ಸುಳ್ಳು ಸುಳ್ಳೇ ಟ್ವೀಟ್ ಮಾಡಿದ್ದರು.
ಇದಾದ ಬಳಿಕ ಭಟ್ಟಂಗಿ ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮಗಳು ಇದೇ ಸುಳ್ಳನ್ನು ಮುಂದಿಟ್ಟು ಇನ್ನಷ್ಟು ಮಸಾಲೆ ಸೇರಿಸಿ ವರದಿಗಳನ್ನು ಪ್ರಸಾರ ಮಾಡಿದವು. ಕನ್ನಡದ ಚಾನಲ್ ಗಳು ಹಾಗು ವೆಬ್ ಸೈಟ್ ಗಳೂ ಸೇರಿಕೊಂಡವು. ದ್ವೇಷವನ್ನು ಹರಡುವ ಪ್ಯಾನೆಲ್ ಡಿಸ್ಕಶನ್ ಗಳಾದವು. ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೊಗಳನ್ನು ಹರಿಯಬಿಡಲಾಗಿದೆ ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ಒತ್ತಿ ಹೇಳಲಾಯಿತು. ತಮ್ಮ ಸುಳ್ಳನ್ನೇ ಸತ್ಯ ಎಂದು ಸಾಬೀತುಪಡಿಸಲು ತಿರುಚಿದ ವಿಡಿಯೊಗಳನ್ನು ಹರಿಯಬಿಡಲಾಯಿತು. ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಡನ್ ಕ್ಯಾಮರಾ ಇಟ್ಟು ಈ ಕೃತ್ಯ ಎಸಗಿದ್ದಾರೆ ಎಂದು ಸುಳ್ಳು ಸುಳ್ಳೇ ಆರೋಪಿಸಲಾಯಿತು.
ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ, " ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ನಮ್ಮ ಮನೆಯ ಅಮಾಯಕ ಹೆಣ್ಣುಮಕ್ಕಳ ಮೇಲೆ ಪ್ರಯೋಗಿಸಬೇಡಿ. ಓಲೈಕೆ ರಾಜಕಾರಣವನ್ನು ಬದಿಗಿಟ್ಟು, ಪೊಲೀಸ್ ಇಲಾಖೆಗೆ ಈ ಘಟನೆಯ ಬಗ್ಗೆ ಮುಕ್ತ ತನಿಖೆಗೆ ಅವಕಾಶ ನೀಡಿ. ಜಿಹಾದಿ ಮನಸ್ಥಿತಿಯನ್ನು ಮಟ್ಟ ಹಾಕಲು ಸಹಕರಿಸಿ. ಉಡುಪಿಯಲ್ಲಿ ಹಿಂದೂ ವಿದ್ಯಾರ್ಥಿನಿಯೋರ್ವಳ ಖಾಸಗಿ ದೃಶ್ಯವನ್ನು ಸೆರೆಹಿಡಿದು ಮುಸ್ಲಿಂ ಯುವಕರಿಗೆ ಹಂಚಿರುವುದು ಪೂರ್ವ ಯೋಜಿತ ಕೃತ್ಯ ಎನ್ನುವುದರಲ್ಲಿ ಅನುಮಾನವಿಲ್ಲ " ಎಂದು ಟ್ವೀಟ್ ಮಾಡಿದ್ದರು.
ಜವಾಬ್ದಾರಿಯುತ ಸ್ಥಾನಗಳನ್ನು ನಿಭಾಯಿಸಿರುವ ಜನಪ್ರತಿನಿಧಿಗಳೇ ಹೀಗೆ ಸುಳ್ಳಾರೋಪ ಮಾಡುವ ಮೂಲಕ " ಹಿಂದೂ ವಿದ್ಯಾರ್ಥಿನಿಯ ವಿಡಿಯೊ ಮಾಡಿ ಮುಸ್ಲಿಂ ಯುವಕರಿಗೆ ಹಂಚಲಾಗಿದೆ " ಎನ್ನುವ ಹಸಿ ಸುಳ್ಳನ್ನು ಮತ್ತಷ್ಟು ಬಲಪಡಿಸಲಾಯಿತು. ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಂದು ಹೆಜ್ಜೆ ಮುಂದೆ ಹೋಗಿ, ‘‘ಉಡುಪಿ ಪ್ರಕರಣ ಸಾಮಾನ್ಯ ಪ್ರಕರಣವಲ್ಲ. ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯ ವಿಡಿಯೊ ಮಾಡಿ, ಮುಸ್ಲಿಂ ಯುವಕರ ಜೊತೆ ಹಂಚಿಕೊಂಡ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದು ಹಿಂದು ಹೆಣ್ಮಕ್ಕಳ ವಿರುದ್ಧ ಪೂರ್ವಯೋಜಿತ ಪಿತೂರಿಯೇ?.." ಎಂದು ಟ್ವೀಟ್ ಮಾಡಿದ್ದರು.
ಹಿಂದೂ ವಿದ್ಯಾರ್ಥಿನಿಯ ಶೌಚಾಲಯದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ ಎನ್ನುವ ಹಸಿ ಹಸಿ ಸುಳ್ಳನ್ನು ಈ ಶಾಸಕ ರಾಜಕೀಯ ಲಾಭಕ್ಕಾಗಿ ಹೇಳಿದ್ದರು. ತನ್ನ ಮೂರ್ಖ ಭಕ್ತ ಪಡೆಯನ್ನು ನಂಬಿಸಿ ಕೆರಳಿಸಿದ್ದರು. ಆರೆಸ್ಸೆಸ್ ನ ಆರ್ಗನೈಸರ್ ವೆಬ್ ಸೈಟ್ ಕೂಡ ಈ ಬಗ್ಗೆ ವರದಿ ಮಾಡಿ " ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಹೆಣ್ಮಕ್ಕಳ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು, ಅವರು ಸ್ನಾನ ಮಾಡುವ ದೃಶ್ಯಗಳನ್ನು ಬೇರೆಯವರ ಜೊತೆ ಹಂಚಿಕೊಂಡಿದ್ದಾರೆ ಎನ್ನುವುದು ತನಿಖೆಗಳಿಂದ ತಿಳಿದುಬಂದಿದೆ " ಎಂದಿತ್ತು.
ರಶ್ಮಿ ಸಾಮಂತ್ ಜೊತೆಗೆ ಸುಳ್ಳು ಸುದ್ದಿಗಳನ್ನು ಹರಡಿ ಹಲವು ಬಾರಿ ಸಿಕ್ಕಿಬಿದ್ದ ಬಲಪಂಥೀಯ ಟ್ರೋಲ್ ಶೆಫಾಲಿ ವೈದ್ಯ ಕೂಡ ಕೈಜೋಡಿಸಿದರು. ಹಲವು ವೆಬ್ ಸೈಟ್ ಗಳು ಈ ಸುಳ್ಳುಕೋರರ ಟ್ವೀಟ್ ಗಳನ್ನೇ ಆಧಾರವಾಗಿಟ್ಟು ಸುದ್ದಿ ಪ್ರಕಟಿಸಿದವು. ಅರುಣ್ ಪುಡೂರ್ ಎಂಬ ಟ್ವಿಟರ್ ಬಳಕೆದಾರನೊಬ್ಬ ಟ್ವೀಟ್ ಮಾಡಿ, " ಈ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾದದ್ದಕ್ಕಿಂತ ಗಂಭೀರವಾಗಿದೆ. ವರ್ಷದಿಂದೀಚೆಗೆ ಮುಸ್ಲಿಂ ಹೆಣ್ಮಕ್ಕಳು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ನೂರಾರು ಹಿಂದೂ ಸಂತ್ರಸ್ತೆಯರಿದ್ದಾರೆ ಎನ್ನುವುದು ಇದರರ್ಥ. ಇದು ಅಜ್ಮೀರ್ ರೇಪ್ ಕೇಸ್ ನಂತೆಯೇ ಇದೆ " ಎಂದಿದ್ದ.
1992ರಲ್ಲಿ ಹೆಣ್ಣುಮಕ್ಕಳ ನಗ್ನ ಫೋಟೊ, ವಿಡಿಯೊಗಳನ್ನು ಮಾಡಿ ಆನಂತರ ಅದನ್ನೇ ಮುಂದಿಟ್ಟು ಹಲವು ಯುವತಿಯರನ್ನು ಅತ್ಯಾಚಾರ ಎಸಗಿದ್ದ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದ್ದ ಪ್ರಕರಣವನ್ನು ಉಡುಪಿ ಪ್ರಕರಣದ ಜೊತೆಗೆ ತಳುಕು ಹಾಕಲಾಯಿತು.
ಹಿಂದೂ ಹೆಣ್ಣುಮಕ್ಕಳ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಇದಕ್ಕೆ ಮುಸ್ಲಿಂ ಹೆಣ್ಮಕ್ಕಲು ಸಾಥ್ ನೀಡಿದ್ದಾರೆ ಎನ್ನುವಂತಹ ಭಯಾನಕ ಸುಳ್ಳನ್ನು ಸೃಷ್ಟಿಸಲಾಯಿತು. ಅದನ್ನು ವ್ಯಾಪಕವಾಗಿ ಹರಡಲಾಯಿತು.
ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ, ಬಲಪಂಥೀಯರು, ಅದೇ ಪಡೆಯ ರಶ್ಮಿ ಸಾಮಂತ್ ಹರಡಿದ್ದ ಹಸಿ ಹಸಿ ಸುಳ್ಳುಗಳ ಹಿಂದಿನ ಸತ್ಯಾಂಶವನ್ನು ಜುಲೈ 25ರಂದು ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಒಂದೊಂದಾಗಿ ತೆರೆದಿಟ್ಟರು.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಉಡುಪಿ ಎಸ್ಪಿ, " ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶಗಳ ಹಾಗೆ ಈ ಪ್ರಕರಣದಲ್ಲಿ ಯಾರೂ ಕೂಡ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟಿಲ್ಲ.ವಿಡಿಯೋ ಮಾಡಿ ಬ್ಲಾಕ್ ಮಾಡುತ್ತಿದ್ದಾರೆ ಎನ್ನವುದು ಎಲ್ಲೂ ಕಂಡು ಬಂದಿಲ್ಲ. ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಉಡುಪಿಯದ್ದಲ್ಲ. ಬೇರೆ ಬೇರೆ ಪ್ರಕರಣಗಳ ವಿಡಿಯೊಗಳನ್ನು ಈ ಪ್ರಕರಣಕ್ಕೆ ಲಿಂಕ್ ಮಾಡಲಾಗಿದೆ. ಈ ಪ್ರಕರಣವನ್ನು ಕಾಲೇಜಿನವರು ಕಾಲೇಜು ಹಂತದಲ್ಲೇ ಮುಗಿಸಿದ್ದಾರೆ. ವಿದ್ಯಾರ್ಥಿಗಳಿಂದ ಸೀಜ್ ಮಾಡಲಾದ ಮೊಬೈಲ್ ಪರಿಶೀಲನೆ ಮಾಡ ಲಾಗಿದ್ದು, ಅದರಲ್ಲಿಯೂ ಯಾವುದೇ ವಿಡಿಯೋ ಸಿಕ್ಕಿಲ್ಲ. ಸಂತ್ರಸ್ತ ವಿದ್ಯಾರ್ಥಿನಿ ಕಾಲೇಜು ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾಳೆ. ನಾವೆಲ್ಲರೂ ಸಹಪಾಠಿಗಳು. ಜೊತೆಗಿರುವವರು. ಮೂವರು ವಿದ್ಯಾರ್ಥಿನಿಯರು ತಮಾಷೆಗಾಗಿ ವಿಡಿಯೊ ಮಾಡಿದ್ದರು. ನಾನು ಆಕ್ಷೇಪಿಸಿದಾಗಲೇ ಡಿಲಿಟ್ ಮಾಡಿದ್ದಾರೆ ಎಂದು ಸಂತ್ರಸ್ತೆಯೇ ಪತ್ರದಲ್ಲಿ ತಿಳಿಸಿದ್ದಾಳೆ" ಎಂದು ಎಸ್ಪಿ ಸ್ಪಷ್ಟವಾಗಿ ಹೇಳಿದ್ದಾರೆ.
ಉಡುಪಿ ಎಸ್ಪಿ ಅಕ್ಷಯ್ ಅವರು ಅತ್ಯಂತ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ಎಲ್ಲರಿಗೂ ಸತ್ಯವನ್ನು ಹೇಳಿದ್ದಾರೆ. ಸುಳ್ಳನ್ನು ಬಯಲು ಮಾಡಿದ್ದಾರೆ. ಆ ಮೂಲಕ ಈ ಪ್ರಕರಣದಲ್ಲಿ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಡಲಾಗಿದೆ, ವಿಡಿಯೊಗಳನ್ನು ಮುಸ್ಲಿಂ ಯುವಕರೊಂದಿಗೆ, ಗ್ರೂಪ್ ಗಳಲ್ಲಿ ಹಂಚಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿದೆ ಎನ್ನುವ ಬಲಪಂಥೀಯರ, ಬಿಜೆಪಿ ನಾಯಕರ ಹಸಿ ಸುಳ್ಳುಗಳು ಸಂಪೂರ್ಣ ಬೆತ್ತಲಾಗಿವೆ.
ಇನ್ನು ಕಾಲೇಜು ಆಡಳಿತ ಮಂಡಳಿ ನಡೆಸಿದ ಸುದ್ದಿಗೋಷ್ಟಿ ಕೂಡ ಈ ಪ್ರಕರಣದಲ್ಲಿನ ಪ್ರಮುಖ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿ ನಿರ್ದೇಶಕಿ ರಶ್ಮಿ, ತಾನು ವಾಶ್ ರೂಮ್ ಗೆ ಹೋದಾಗ ಮೊಬೈಲ್ ನಲ್ಲಿ ವಿಡಿಯೊ ಮಾಡಿದ್ದನ್ನು ನೋಡಿದ್ದೇನೆ. ಆಕ್ಷೇಪಿಸಿದಾಗ ಅವರು ತನ್ನ ಎದುರಲ್ಲೇ ವಿಡಿಯೊ ಡಿಲಿಟ್ ಮಾಡಿದ್ದಾರೆ. ಇದು ತಮಾಷೆಗಾಗಿ ಮಾಡಿದ ವಿಡಿಯೊ ಎಂದು ವಿದ್ಯಾರ್ಥಿನಿಯರು ತಪ್ಪೊಪ್ಪಿಕೊಂಡಿದ್ದಾರೆ. ನಾವು ಕೂಡ ಮೊಬೈಲ್ ಪರಿಶೀಲಿಸಿದಾಗ ಯಾವುದೇ ವಿಡಿಯೊ ನಮಗೂ ಕಂಡಿಲ್ಲ. ಪ್ರಮುಖವಾಗಿ ಸ್ವತಃ ಸಂತ್ರಸ್ತ ವಿದ್ಯಾರ್ಥಿನಿ ತನ್ನ ಮತ್ತು ಸಹಪಾಠಿಗಳ ಭವಿಷ್ಯದ ದೃಷ್ಟಿಯಿಂದ ದೂರು ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಳು. ಈಗಾಗಲೇ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. ಮೇಲಾಗಿ ಈ ಹಿಂದೆ ಇದೇ ಕಾಲೇಜಿನಲ್ಲಿ ಇಂತಹ ಘಟನೆಗಳು ನಡೆದಿದೆ ಎನ್ನುವ ಆರೋಪಗಳ ಬಗ್ಗೆ ಪ್ರತಿಕ್ರಯಿಸಿ, ಯಾವುದೇ ವಿಷಯ ತಿಳಿದುಕೊಳ್ಳದೆ ತಪ್ಪು ಸಂದೇಶ ಹರಡಬೇಡಿ. ಇಂತಹ ಘಟನೆ ಹಿಂದೆ ನಡೆದೇ ಇಲ್ಲ. ನಡೆದಿದೆ ಎಂದು ಹೇಳಬೇಡಿ ಎಂದರು.
ಇನ್ನು ಪ್ರಮುಖವಾಗಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರೊಬ್ಬರು ಈ ಪ್ರಕರಣದಲ್ಲಿ ಧರ್ಮವನ್ನು ಎಳೆದುತರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, " ಈ ಪ್ರಕರಣದಲ್ಲಿ ಆ ಧರ್ಮ ಈ ಧರ್ಮ ಇಲ್ಲ. ಆರೋಪಿತ ವಿದ್ಯಾರ್ಥೀನಿಯರ ಧರ್ಮಕ್ಕೆ ಸೇರಿದ ಇತರ ವಿದ್ಯಾರ್ಥಿಗಳು ಸಂತ್ರಸ್ತೆ ವಿದ್ಯಾರ್ತಿನಿಯ ಪರ ಧ್ವನಿ ಎತ್ತಿದ್ದಾರೆ, ಇಂತಹ ಘಟನೆ ನಡೆಯಬಾರದಿತ್ತು ಎಂದು ಗಟ್ಟಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಇದರಲ್ಲಿ ಕೋಮು ವಿಚಾರವೇ ಇಲ್ಲ " ಎಂದು ಹೇಳಿದ್ರು.
ಇನ್ನು ಈ ಇಡೀ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ರಶ್ಮಿ ಸಾಮಂತ್ . ತಾನು ಮಾಡಿದ ಸುಳ್ಳು ಆರೋಪಗಳ ಹಿಂದಿನ ಸತ್ಯಾಂಶ ಬಯಲಾಗುತ್ತಿದ್ದಂತೆ ತಾನು ಇಲ್ಲದಾಗ ಪೊಲೀಸರು ಮನೆಗೆ ಹೋಗಿದ್ದಾರೆ. ತನ್ನ ಮೇಲೆ ನಡೆದ ದಾಳಿ ಎಂದೆಲ್ಲಾ ಅಲವತ್ತುಕೊಂಡಾಕೆ ಈಕೆ. ಈಕೆಗೆ ಸುಳ್ಳುಗಳಿಗೆ ಧ್ವನಿಗೂಡಿಸದೆ, ಪೊಲೀಸರು ಪ್ರಶ್ನಿಸಿದ್ದೇ ತಪ್ಪು ಎನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನೀಡುತ್ತಿದ್ದಾರೆ. ಬಿಜೆಪಿಯ ಹಲವು ನಾಯಕರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸುಳ್ಳು ಸುದ್ದಿ ಎಂಬ ವೃಥಾ ಆರೋಪ ಹೊರಿಸಿ ರಶ್ಮಿ ಸಾಮಂತರವರ ಮನೆಗೆ ರಾತ್ರೋ ರಾತ್ರಿ ಅಕ್ರಮವಾಗಿ ಪೊಲೀಸರು ನುಗ್ಗಿ ಕಿರುಕುಳ ನೀಡಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ "ಉಡುಪಿಯ ನಮ್ಮ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ರಶ್ಮಿ ಸಾಮಂತ್ ಅವರ ಮನೆಯವರನ್ನು ಭೇಟಿಯಾಗಿದ್ದಾರೆ. ಅವರ ಕುಟುಂಬದ ಜೊತೆಗೆ ನಾವಿದ್ದೇವೆ. ರಶ್ಮಿ ಸಾವಂತ್ ಮತ್ತು ಶೆಫಾಲಿ ವೈದ್ಯ ಅವರು ಯಾವ ಕಾರಣಕ್ಕೂ ಧೈರ್ಯಗೆಡುವ ಅಗತ್ಯವಿಲ್ಲ . ನಿಮ್ಮ ಬೆನ್ನಿಗೆ ನಾವಿದ್ದೇವೆ. ಸರ್ಕಾರದ ಈ ಜಿಹಾದಿ ಮನಸ್ಥಿತಿಯ ವಿರುದ್ಧ ನಮ್ಮ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ'' ಎಂದಿದ್ದಾರೆ.
ರಾಜ್ಯ ಬಿಜೆಪಿ ಟ್ವೀಟ್ ಮಾಡಿ " ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂಗಳನ್ನು ವ್ಯವಸ್ಥಿತವಾಗಿ ಹಳಿಯುವ ಮತ್ತು ಅವರ ಮೇಲೆ ಸರ್ಕಾರಿ ಯಂತ್ರ ದುರ್ಬಳಕೆ ಮಾಡಿ ಆಕ್ರಮಿಸುವ ಕೆಲಸಕ್ಕೆ ಕೈ ಹಾಕಿದೆ. ಉಡುಪಿಯ ಕಾಲೇಜಿನಲ್ಲಿ ನಡೆದ ಅಮಾನುಷ ಘಟನೆ ಬಗ್ಗೆ ಸುಮ್ಮನಿರುವ ಸರ್ಕಾರವನ್ನು ಪ್ರಶ್ನಿಸಿದ, ಹಿಂದೂ ವಿದ್ಯಾರ್ಥಿಗಳ ಪರ ಧ್ವನಿಯಾದ ಉಡುಪಿಯ ನಿವಾಸಿ ರಶ್ಮಿ ಸಾಮಂತ ಎಂಬುವವರ ಮನೆಗೆ ತುಘಲಕ್ ಸರ್ಕಾರವು ಪೊಲೀಸರನ್ನು ಕಳುಹಿಸಿ ಬೆದರಿಸುವ ಕೆಲಸ ಮಾಡಿದೆ " ಎಂದು ಹೇಳಿದೆ.
ಆದರೆ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಎಸ್ಪಿ, ಈ ಟ್ವೀಟ್ ಗಳನ್ನು ನಕಲಿ ಖಾತೆಯಿಂದ ಮಾಡಲಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನಾವು ಅವರ ಮನೆಗೆ ಭೇಟಿ ನೀಡಿದ್ದೆವು. ಟ್ವೀಟ್ ಗಳಲ್ಲಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಪೊಲೀಸರು ಹೋಗಿದ್ದರು ಎಂದು ಹೇಳಿದ್ದರು.
ಇನ್ನು ಹಸಿ ಹಸಿ ಸುಳ್ಳುಗಳ ಮೂಲಕ ಇಡಿ ಪ್ರಕರಣಕ್ಕೆ ಕೋಮು ದ್ವೇಷದ ಬಣ್ಣ ಹಚ್ಚಿದ ರಶ್ಮಿ ಸಾಮಂತ್ ಗೆ ವಿವಾದಗಳೇನೂ ಹೊಸದಲ್ಲ. ಈ ಹಿಂದೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ಈಕೆ ಅಧ್ಯಕ್ಷೆಯಾಗಿ ಕೆಲ ದಿನಗಳಲ್ಲೇ ಆ ಸ್ಥಾನದಿಂದ ಕೆಳಗಿಳಿಯಬೇಕಾಗಿತ್ತು. ಇದಕ್ಕೆ ಕಾರಣವಾದದ್ದು ಈ ಹಿಂದೆ ಈಕೆ ಮಾಡಿದ್ದಂತಹ ಜನಾಂಗೀಯವಾದಿ, ಯಹೂದಿ ವಿರೋಧಿ ಹಾಗು ಮಂಗಳಮುಖಿ ವಿರೋಧಿ ಪೋಸ್ಟ್ ಗಳು. ಈ ಕುರಿತು ಬಹಿರಂಗ ಪತ್ರ ಬರೆದಿದ್ದ ರಶ್ಮಿ ಸಾಮಂತ್ ಕ್ಷಮೆಯಾಚಿಸಿದ್ದರು. ಆದರೆ ಆಕೆ ಆಕ್ಸ್ ಫರ್ಟ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಹೀಗಾಗಿ ಜನಾಂಗೀಯ ತಾರತಮ್ಯದ ಪೋಸ್ಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಈಕೆಯ ಮನಸ್ಥಿತಿ ಏನು ಎನ್ನುವುದು ಅದರಲ್ಲೇ ಬಯಲಾಗುತ್ತದೆ.
ಒಟ್ಟಿನಲ್ಲಿ ಇತ್ತಿಚೆಗಷ್ಟೇ ತೀರ್ಥಹಳ್ಳಿಯ ಕಾಲೇಜಿನ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೊಗಳನ್ನು ಎಬಿವಿಪಿ ಕಾರ್ಯಕರ್ತ ಹರಿಯಬಿಟ್ಟಾಗ ಸುಮ್ಮನಿದ್ದ, ಸೌಜನ್ಯ ಪ್ರಕರಣದಲ್ಲಿ ಬಾಯಿ ಬಿಡಲೂ ಅಂಜುವ, ಮಣಿಪುರದಲ್ಲಿ ಮಹಿಳೆಯರ ನಗ್ನ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿದಾಗ ಸಂತ್ರಸ್ತ ಸಮುದಾಯ ಅಪರಾಧ ಪ್ರವೃತ್ತಿಯವರು ಎಂದು ಹೇಳುವ ನಕಲಿ ಹಿಂದೂ ಹೋರಾಟಗಾರರೆಲ್ಲಾ ಈಗ ಜೀವಂತವಾಗಿದ್ದಾರೆ. ಹಿಂದೂ ಹೆಣ್ಮಕ್ಕಳ ವಿಡಿಯೊಗಳು ಹರಿದಾಡುತ್ತಿದೆ ಎಂದು ರಾಜಕೀಯ ಲಾಭಕ್ಕಾಗಿ ಹಸಿ ಸುಳ್ಳು ಹೇಳಿ ಹಿಂದೂ ಹೆಣ್ಮಗಳ ಮಾನ ಹರಾಜು ಹಾಕುತ್ತಿದ್ದಾರೆ.
"ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಫೇಕ್ ಫ್ಯಾಕ್ಟರಿ ಹೊಸ ಹೊಸ ಟೂಲ್ ಕಿಟ್ ತಯಾರು ಮಾಡುತ್ತಿದೆ, ಅದರ ಭಾಗವಾಗಿ “ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ“ ಎಂದು ನಕಲಿ ಸುದ್ದಿಯ ಸ್ಕ್ರಿಪ್ಟ್ ತಯಾರಿಸಿದೆ. ಯಾವುದೇ ದೂರು ದಾಖಲಾಗದಿದ್ದರೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿರುವುದು ಪತ್ತೆಯಾಗಿಲ್ಲ. ಬಿಜೆಪಿಯ ಫೇಕ್ ಫ್ಯಾಕ್ಟರಿಯ ಸದಸ್ಯೆ ಸೃಷ್ಟಿಸಿದ ಸುಳ್ಳನ್ನೇ ಹಿಡಿದು ಜಗ್ಗಾಡುತ್ತಿರುವ ಬಿಜೆಪಿ ನಾಯಕರ ಹತಾಶೆಯು ಮಿತಿಮೀರಿ ಕಟ್ಟೆಯೊಡೆದಿರುವುದಕ್ಕೆ ಈ ವಿಷಯವೇ ಸಾಕ್ಷಿ! " ಎಂದಿರುವ ಕಾಂಗ್ರೆಸ್ " ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ABVP ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ? " ಎಂದು ಕೇಳಿದೆ.
ಸ್ವತಃ ಪೊಲೀಸ್ ಇಲಾಖೆಯೆ ಎಲ್ಲ ಆರೋಪಗಳು ಸುಳ್ಳು ಎಂದಿದ್ದರೂ ಬಲಪಂಥೀಯರ ಸುಳ್ಳಿನ ಪ್ರಚಾರ ಇನ್ನೂ ನಿಂತಿಲ್ಲ. ಹಿಜಾಬ್ ವಿವಾದದಂತೆಯೇ ಈ ಬಾರಿ ದೊಡ್ಡ ಅನಾಹುತ ಸೃಷ್ಟಿಸಬಲ್ಲ ಸುಳ್ಳೊಂದು ಬಲಪಂಥೀಯರ ಪಾಲಿಗೆ ಬಂದೊದಗಿದೆ. ಅದರ ವ್ಯವಸ್ಥಿತ ಪ್ರಚಾರ ನಡೆಯುತ್ತಿದೆ. ಮಾಧ್ಯಮಗಳು, ಬಲಪಂಥೀಯ ಟ್ರೋಲ್ ಗಳು ಈ ಸುಳ್ಳುಗಳ ಪ್ರಚಾರಕ್ಕೆ ಸದಾ ಸಿದ್ಧವಾಗಿಯೇ ಇದ್ದಾರೆ. ಬಿಜೆಪಿಯ ಹಿರಿಯ ನಾಯಕರೇ ರಂಗಕ್ಕೆ ಧುಮುಕಿದ್ದಾರೆ. ನಾಳೆ ಉಡುಪಿಯಲ್ಲಿ ಬಿಜೆಪಿ ದೊಡ್ಡ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ. ಆದರೆ ಕರಾವಳಿಯ ಜನರು ರಾಜಕೀಯ ಲಾಭಕ್ಕಾಗಿ ಸಮಾಜದ ಹೆಣ್ಣುಮಕ್ಕಳ ಮಾನ ಹರಾಜು ಹಾಕಲೂ ಹಿಂಜರಿಯದ ಶಕ್ತಿಗಳ ವಿರುದ್ಧ ಜಾಗೃತವಾಗಬೇಕಿದೆ.
ಎಬಿವಿಪಿ ಅಧ್ಯಕ್ಷ ವೀಡಿಯೊ ಹರಿಬಿಟ್ಟಿದ್ದರೆ ಅದು ಕ್ರಿಮಿನಲ್ ಅಪರಾಧ. ಅದಕ್ಕಾಗಿ ಆತನಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಬಿಜೆಪಿ ಮುಖಂಡರು ಅದಕ್ಕಾಗಿ ಆಗ್ರಹಿಸಬೇಕು. ಇನ್ನು ರೀಲ್ಸ್ ನಲ್ಲಿ ಮುಳುಗಿರುವ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಾತ್ ರೂಮಿನಲ್ಲಿ ಮೊಬೈಲ್ ನಲ್ಲಿ ವೀಡಿಯೊ ಮಾಡುವುದು ತಮಾಷೆ ಅಲ್ಲ ಎಂದು ಪೋಷಕರು, ಕಾಲೇಜು ಶಿಕ್ಷಕರೂ ಸರಿಯಾಗಿ ತಿಳುವಳಿಕೆ ನೀಡಬೇಕಾಗಿದೆ. ಕೌನ್ಸೆಲಿಂಗ್ ಮಾಡಬೇಕಾಗಿದೆ. ಅದನ್ನು ಕೋಮು ದ್ವೇಷ ಹಾಗು ಕಪಟ ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿಟ್ಟು ಮಾಡಬೇಕಾಗಿದೆ.