ವಿದ್ಯಾರ್ಥಿಗಳ ದಿಕ್ಕು ತಪ್ಪಿಸಿದ ತಪ್ಪು ನಿರ್ಧಾರಗಳು

Update: 2023-07-21 07:22 GMT

ಕೆ. ಎಸ್. ಮಂಗಳೂರು

ಮಾನ್ಯರೇ,

ಕೋವಿಡ್ ಕಾಲದಲ್ಲಿ ನಡೆದ ಅವಾಂತರ, ಅವ್ಯವಹಾರಗಳ ಬಗ್ಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ‘ವಾರ್ತಾಭಾರತಿ’ಯಲ್ಲಿ ಸಾಕಷ್ಟು ಮಾಹಿತಿ ನೀಡಿದ್ದಾರೆ. ಶಾಲೆ ಕಾಲೇಜುಗಳನ್ನು ಮುಚ್ಚಿಸಿ, ವ್ಯವಹಾರ ಉದ್ಯಮಗಳನ್ನು ಬಂದ್ ಮಾಡಿ, ಸಂಚಾರ ನಿರ್ಬಂಧಿಸಿ ಸರಕಾರ ಕೈಗೊಂಡ ಕ್ರಮಗಳಿಂದ ಕಷ್ಟ ನಷ್ಟ, ಸಾವು ನೋವು ಅನುಭವಿಸಿದವರು ಜನಸಾಮಾನ್ಯರು. ಕೋವಿಡ್‌ನ ಬಗ್ಗೆ ಅನಗತ್ಯ ಭಯವನ್ನು ಹುಟ್ಟಿಸಿ ಒಟ್ಟು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ಸರಕಾರ ಮತ್ತು ಸರಕಾರಕ್ಕೆ ಸಲಹೆ ನೀಡುತ್ತಿದ್ದ ಮಹಾನುಭಾವರು, ಈಗೇನು ಹೇಳುತ್ತಾರೆ?. ದೇಶದಲ್ಲಿ ಕೋವಿಡ್ ಸಂಪೂರ್ಣ ಮೂಲೋತ್ಪಾಟನೆ ಆಗಿದೆಯೆಂದು ಹೇಳಬಲ್ಲರೇ?

ಒಟ್ಟು ವಿದ್ಯಮಾನವನ್ನು ಇಂದು ಅವಲೋಕಿಸುವಾಗ ಎಲ್ಲವೂ ಶ್ರೀನಿವಾಸ ಕಕ್ಕಿಲ್ಲಾಯರು ಹೇಳಿದಂತೆಯೇ ನಡೆದಿದೆ. ಕಾಲ ಕಳೆದಂತೆ ಕೋವಿಡ್ ಪ್ರಸರಣ ಹೆಚ್ಚು ಕಡಿಮೆ ಎಲ್ಲ ಮನೆಗಳಿಗೂ ವ್ಯಾಪಿಸಿ, ಕೆಲವರಿಗೆ ಒಂದೆರಡು ದಿನಗಳ ರೋಗಲಕ್ಷಣಗಳನ್ನಿತ್ತು ಮಾಯವಾಗಿದೆ; ಇನ್ನು ಹಲವರಲ್ಲಿ ಅವರಿಗೆ ಗೊತ್ತಿಲ್ಲದೆಯೇ ರೋಗನಿರೋಧಕ ಶಕ್ತಿಯನ್ನು ಉಂಟುಮಾಡಿ ಕಣ್ಮರೆಯಾಗಿದೆ.

ಕೋವಿಡ್ ಕಾರಣದಿಂದ ಮೃತರಾದವರ ಸಂಖ್ಯೆಗಿಂತ ಅದನ್ನು ತಗಲಿಸಿಕೊಂಡವರು ಹೆದರಿ ಪ್ರಾಣ ಕಳೆದುಕೊಂಡದ್ದೇ ಹೆಚ್ಚಾಗಿರಬಹುದು. ಏಕೆಂದರೆ ಗಹನವಾದ ಕಾಯಿಲೆ ಇದ್ದವರಿಗೆ ಮತ್ತು ವಯೋವೃದ್ಧರಿಗೆ ಮಾತ್ರ ಕೋವಿಡ್ ಸೋಂಕು ಅಪಾಯಕಾರಿಯಾಗಿದ್ದದ್ದು.

ಇಷ್ಟರಲ್ಲಿ ಸರಕಾರ ಅಪ್ರಬುದ್ಧರ ಮಾತು ಕೇಳಿ ಕೈಗೊಂಡ ಕ್ರಮಗಳಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿದ್ದುವು. ಕೂಲಿ ಕಾರ್ಮಿಕರ ಪ್ರಯಾಣ ಕಾಲದ ಸಮಸ್ಯೆಗಳಂತೂ ಅತಿ ದೊಡ್ಡ ಅನಾಹುತ. ಕೋವಿಡ್ ಹೆಸರಿನಲ್ಲಿ ನಡೆದ ಭ್ರಷ್ಟಾಚಾರದ ಕತೆ ಮತ್ತೊಂದು. ಡಾ. ಕಕ್ಕಿಲ್ಲಾಯರು ಅದನ್ನು ನಿಖರವಾಗಿ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕಾದ ಹಾನಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಶಾಲೆ ಕಾಲೇಜುಗಳನ್ನು ಮುಚ್ಚಿಸಿ, ಆನ್‌ಲೈನ್ ಪಾಠಗಳಿಗೆ ಚಾಲನೆ ನೀಡಿದ ನಿರ್ಧಾರ, ಒಂದು ಗಂಭೀರ ಲೋಪ. ಅಂದಿನ ದಿನಗಳಲ್ಲಿ ಮನೆಯಲ್ಲಿ ಮೊಬೈಲುಗಳಿಲ್ಲದೆ, ಇದ್ದರೂ ಸಿಗ್ನಲ್ ಸಿಗದೆ, ಏನೂ ಮಾಡಲಾಗದೆ ಸೋತ ಬಡ ಮಕ್ಕಳ ಪಾಡು ಹೇಳುವುದು ಬೇಡ. ಅನಿರ್ದಿಷ್ಟವಾಗಿ ಮುಂದುವರಿದ ಈ ಆನ್‌ಲೈನ್ ತರಗತಿಗಳಿಂದಾಗಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಅಂಟಿಸಿಕೊಳ್ಳಲು ಕಾರಣವಾಯಿತು. ಹಾಗೆ ಅಂಟಿಸಿಕೊಂಡ ಗೀಳಿನಿಂದ ಎಷ್ಟೋ ವಿದ್ಯಾರ್ಥಿಗಳು ಇಂದಿಗೂ ಹೊರಬಂದಿಲ್ಲ.

ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಗೀಳಿನಿಂದ ತಮ್ಮ ಮಕ್ಕಳನ್ನು ಈಚೆ ತರಲು ಅವೆಷ್ಟೋ ಮಂದಿ ಹೆತ್ತವರು ಇಂದಿಗೂ ಪೇಚಾಡುತ್ತಲೇ ಇದ್ದಾರೆ. ಗೀಳಿಗೊಳಪಟ್ಟ ಮಕ್ಕಳ ಕಲಿಕೆ ತುಂಬ ಕೆಳಗಿಳಿದಿದೆ. ಸಾಲದ್ದಕ್ಕೆ ಈಗೀಗ ಶಿಕ್ಷಕರೂ ಕೆಲವು ವಿಷಯಗಳಲ್ಲಿ ಆನ್‌ಲೈನ್ ಪದ್ಧತಿಯನ್ನು ಮುಂದುವರಿಸುತ್ತಿದ್ದಾರೆ. ನೋಟ್ಸ್ ಅಥವಾ ಇನ್ನಿತರ ಕಲಿಕಾ ಸೂಚನೆಗಳನ್ನು ಮೊಬೈಲ್ ಮೂಲಕವೇ ಕಳುಹಿಸುತ್ತಾ ತಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಇಂದು ಆನ್‌ಲೈನ್ ತರಗತಿಗಳು ಇಲ್ಲದಿದ್ದರೂ ವಿದ್ಯಾರ್ಥಿಗಳು ಮೊಬೈಲನ್ನು ಕೈಯಿಂದ ಬಿಟ್ಟಿರಲಾರದ ಸ್ಥಿತಿ.

ಹೀಗಿರುವಾಗ ಹೆತ್ತವರಿಗೂ ಇಕ್ಕಟ್ಟು. ಮೊಬೈಲ್ ದೂರವಿಟ್ಟು ಪುಸ್ತಕಗಳನ್ನು ಓದಿಕೊ, ಎಂದೂ ಹೇಳುವ ಹಾಗಿಲ್ಲ. ಗೀಳು ಹತ್ತಿಸಿಕೊಂಡವರನ್ನು ಅದರಿಂದ ವಿಮುಖಗೊಳಿಸುವುದು ಅಷ್ಟೊಂದು ಸುಲಭವೂ ಅಲ್ಲ. ಎಲ್ಲ ಮಕ್ಕಳ ಮಾನಸಿಕ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ಮೊಬೈಲ್ ಉಪಯೋಗಿಸಬೇಡವೆಂದು ನಿರ್ಬಂಧಿಸಿದಾಗ, ಅದನ್ನು ಅರಗಿಸಿಕೊಳ್ಳಲಾಗದ ಕೆಲವು ಮಂದಿ ಜೀವಹಾನಿ ಮಾಡಿಕೊಳ್ಳಲು ಮುಂದಾದ ಘಟನೆಗಳು ನಡೆದಿವೆ.

ಹಾಗಾಗಿ ಕೋವಿಡ್ ನಿರ್ವಹಣೆಯ ದಿನಗಳಲ್ಲಿ ಸರಕಾರ ಕೈಗೊಂಡ ತಪ್ಪು ನಿರ್ಧಾರಗಳಿಂದಾದ ಹಾನಿ ಹಲವು ಬಗೆಯದ್ದು. ಲಸಿಕೆ ಪ್ರಯೋಗದ ಪರಿಣಾಮಗಳ ಅಧ್ಯಯನ ಇನ್ನು ನಡೆಯಬೇಕಷ್ಟೆ. ಅವಸರವಸರವಾಗಿ ಲಸಿಕೆ ತಯಾರಿಸುವ ಆತುರಕ್ಕೆ ಬಿದ್ದ ಔಷಧ ತಯಾರಿಕಾ ಕಂಪೆನಿಗಳು, ಲಸಿಕೆಯ ಪರಿಣಾಮಗಳ ಅಧ್ಯಯನಕ್ಕೆ ಸಾಕಷ್ಟು ಸಮಯವನ್ನೂ ಬಳಕೆ ಮಾಡಲಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತದ ಮರಣಗಳು ಹೆಚ್ಚು ಸಂಭವಿಸುತ್ತಿರುವುದು ಏಕೆಂದು ಗೊತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News