ಸಂವಿಧಾನ ರಕ್ಷಣೆ, ಜಾತ್ಯಾತೀತತೆ ಉಳಿವಿಗಾಗಿ ಬಿಜೆಪಿ ಸೋಲಿಸಿ: ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಕರೆ

Defeat BJP for protection of Constitution, survival of secularism: CPI(M) State Secretary U. Basavaraj calls

Update: 2024-04-07 16:30 GMT

ಮೈಸೂರು : ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯ ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿರುವ ಮೋದಿ ಸರ್ಕಾರವನ್ನು ಸೋಲಿಸಬೇಕು ಎಂದು  ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಕರೆ ನೀಡಿದರು.

ನಗರದ ಮೈಸೂರು ಕೋ.ಆಪರೇಟಿವ್ ಸೊಸೈಟಿ ಸಮುದಾಯ ಭವನದಲ್ಲಿ  ರವಿವಾರ ಭಾರತ ಕಮ್ಯುನಿಸ್ಟ್ ( ಮಾರ್ಕ್ಸ್ ವಾದಿ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ನಡೆದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ದಿನಗಳನ್ನು ತರುತ್ತೇವೆ ಎಂದು ಹೇಳಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ  ಜನರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಮಾಡದೆ 5 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾಗಿದ್ದಲ್ಲದೆ, ವಿಶ್ವದ ಮುಂದೆ ದೇಶವನ್ನು ತಲೆತಗ್ಗಿಸುವಂತೆ ಮಾಡಿದ್ದೆ ಮೋದಿಯ ಸಾಧನೆಯಾಗಿದೆ ಎಂದು ಕಿಡಿಕಾರಿದರು. 

 ಸಂವಿಧಾನದ ಅಡಿಯಲ್ಲೇ ಸರ್ಕಾರ ರಚಿಸಿ ಈಗ ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡುವಂತಹ ಹಾಗೂ ಪ್ರಜಾಪ್ರಭುತ್ವದ ಮೌಲ್ಯವನ್ನು ಹಾಳು ಮಾಡಿದ್ದಾರೆ. ಪ್ರಭುತ್ವವನ್ನು ಪ್ರಶ್ನೆ ಮಾಡುವವರನ್ನು ಜೈಲಿಗಟ್ಟುವ, ಬೆಳೆಗಳಿಗೆ ನ್ಯಾಯಯುತ ಬೆಲೆ ಕೇಳುವ, ಕೆಲಸಕ್ಕೆ ಕೂಲಿ ಕೇಳುವ ರೈತ-ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದೇ ಮೋದಿಯ ಅವಧಿಯ ಒಳ್ಳೆಯ ದಿನಗಳಾಗಿವೆ ಎಂದು ವ್ಯಂಗ್ಯವಾಡಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಮೈಸೂರು ಜಿಲ್ಲೆಗೆ ಬಿಜೆಪಿಯ ಕೊಡುಗೆ ಶೂನ್ಯ. ನೋಟ್ ಬ್ಯಾನ್,ಅವೈಜ್ಞಾನಿಕ ಜಿಎಸ್‍ಟಿಯನ್ನು ಜಾರಿಗೆ ತರುವ ಮೂಲಕ ಹಾಗೂ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಉದ್ಯೋಗ ನಷ್ಟವಾಗಿದೆ. 26,000 ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಮುಚ್ಚಿವೆ, ಇದರಿಂದಾಗಿ ನೂರಾರು ಕುಟುಂಬ ಬೀದಿ ಪಾಲಾಗಿದೆ. ಆದರೂ ಮೋದಿ ಸರ್ಕಾರ ಇವುಗಳ ಪುನಶ್ಚೇತನಕ್ಕೆ ಹಾಗೂ ಉದ್ಯೋಗದ ಸೃಷ್ಟಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಸಮ್ಮೇಳನವು ಬಿಜೆಪಿಯನ್ನು ಸೋಲಿಸಿ ಇಂಡಿಯಾ ಒಕ್ಕೂಟವನ್ನ ಗೆಲ್ಲಿಸಲು ನಿರ್ಣಯವನ್ನು ಕೈಗೊಂಡಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್,ಎನ್. ವಿಜಯಕುಮಾರ್,ಜಿ.ಜಯರಾಂ, ಲ.ಜಗನ್ನಾಥ್, ವಿ.ಬಸವರಾಜ್, ಬಿ ಎಂ ಶಿವಣ್ಣ, ಜಿ ರಾಜೇಂದ್ರ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News