ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ತಂದಿದ್ದ ತಡೆಯಾಜ್ಞೆ ತೆರವು : ಎಂ.ಲಕ್ಷ್ಮಣ್
ಮೈಸೂರು : ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ತಂದಿದ್ದ ತಡೆಯಾಜ್ಞೆ ತೆರವುಗೊಂಡಿದ್ದು, ಸೆ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಯಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʼಚಾಮುಂಡಿ ಬೆಟ್ಟ ಅಭಿವೃದ್ಧಿಗಾಗಿ 01-07-2024 ರಂದು ಸರಕಾರರ ಅದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿ ಪ್ರಮೋದಾದೇವಿ ಅವರು 26.07-2024 ರಂದು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಬಳಿಕ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು, 22-08-2024 ರಂದು ತಡೆಯಾಜ್ಞೆ ತೆರವುಗೊಳಿಸಿದ್ದಾರೆ ಎಂದು ಹೇಳಿದರು.
ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವ ಜನಪ್ರತಿನಿಧಿಗಳನ್ನು ಸರಕಾರ ನಾಮನಿರ್ದೇನ ಮಾಡಲು ಸಾಧ್ಯವಿಲ್ಲ. ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದು, ಮುಜರಾಯಿ, ಪ್ರವಾಸೋಧ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳು ಪದನಿಮಿತ್ತ ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಇತರರು ಪ್ರಾಧಿಕಾರದ ಸದಸ್ಯರಾಗಿರುತ್ತಾರೆ. ರಾಜವಂಶಸ್ಥರ ಕುಟುಂಬದ ಓರ್ವ ಸದಸ್ಯರು ಶಾಶ್ವತ ಸದಸ್ಯರಾಗಿರುತ್ತಾರೆ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್ ಮೇಲರ್: ಆರ್.ಟಿ.ಐ ಕಾರ್ಯಕರ್ತ ಮತ್ತು ಸ್ವಯಂ ಪತ್ರಕರ್ತ ಎಂದು ಹೇಳಿಕೊಳ್ಳುವ ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್ ಮೇಲರ್. ಇದನ್ನು ನಾನು ಹೇಳುತ್ತಿಲ್ಲ, ಪೊಲೀಸ್ ಇಲಾಖೆಯವರೇ ನ್ಯಾಯಾಯಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ ಎಂದು ಎಂ.ಲಕ್ಷ್ಮಣ್ ಹೇಳಿದರು.
ಬಿಜೆಪಿ ಅವಧಿಯಲ್ಲಿ ಎಷ್ಟು ನಿವೇಶನ ನೀಡಿದ್ದೀರಿ :
ಮುಡಾ ವಿಚಾರವಾಗಿ ನಾನು ಮಾತನಾಡಿದರೆ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡದಂತೆ ನೋಟಿಸ್ ನೀಡುತ್ತಾರೆ. ಮುಡಾದಲ್ಲಿ 87 ಸಾವಿರ ಜನರು ನಿವೇಶನಕ್ಕಾಗಿ ಅರ್ಜಿ ಹಾಕಿದ್ದಾರೆ ಎಂದು ಹೇಳುವ ನೀವು ನಿಮ್ಮ ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ನಿವೇಶನಗಳನ್ನು ನೀಡಿದ್ದೀರಾ ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.
ಸಿದ್ಧಾರ್ಥ ಟ್ರಸ್ಟ್ ಕ್ರಮ ಬದ್ಧವಾಗಿ ಭೂಮಿ ಪಡೆದಿದೆ :
ಸಿದ್ಧಾರ್ಥ ಟ್ರಸ್ಟ್ ಕಾನೂನು ಪ್ರಕಾರವೇ ಕೆ.ಐ.ಡಿ.ಬಿ ಯಿಂದ ಭೂಮಿ ಪಡೆದಿದೆ. ಛಲವಾದಿ ನಾರಾಯಣಸ್ವಾಮಿ ಸುಳ್ಳು ಆರೋಪಗಳನ್ನು ಮಾಡಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.