ಮೈಸೂರು ವಿವಿ 104 ನೇ ಘಟಿಕೋತ್ಸವ: 32,249 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸುದರ್ಶನ ನರಸಿಂಹ ಕ್ಷೇತ್ರದ ಪೀಠಾದಿಪತಿ ಡಾ. ಭಾಷ್ಯಂಸ್ವಾಮಿ, ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ, ಮಾಜಿ ಸಚವಿ ಎಂ.ಆರ್. ಸೀತಾರಾಂ ಹಾಗೂ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ರವಿವಾರ ನಡೆದ 104ನೇ ಘಟಿಕೋತ್ಸವದಲ್ಲಿ ನಾಲ್ವರಿಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಇದೇ ವೇಳೆ 32249 ವಿದ್ಯಾರ್ಥಿಗಳಿಗೆ ವಿವಿದ ಪದವಿ ಪ್ರದಾನ ಮಾಡಲಾಯಿತು. 436 ಪದಕ, 266 ನಗದು ಬಹುಮಾನ ವಿತರಣೆ ಮಾಡಲಾಯಿತು.
ಜಾವಗಲ್ ಗೈರಾಗಿದ್ದರು: ಮೈಸೂರು ವಿವಿ 103ನೇ ಘಟಿಕೋತ್ಸವದಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರನ್ನು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಲಾಗಿತ್ತು. ಆದರೆ, ಅವರು 2023ರ ಅಕ್ಟೋಬರ್ ನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಘಟಿಕೋತ್ಸವಕ್ಕೆ ಗೈರಾಗಿದ್ದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ವೇದ ಕಾಲದಿಂದ ಇಂದಿನವರೆಗೂ ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲಿ ಅನುಪಮವಾದ ಜ್ಞಾನವನ್ನು ಗಳಿಸಿದ್ದಾರೆ. ಖಗೋಳ ವಿಜ್ಞಾನದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಇಡೀ ಜಗತ್ತಿಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮತ್ತು ಜಗತ್ತಿಗೆ ಹೊಸ ದಿಕ್ಕನ್ನು ನೀಡಲು ಉತ್ತಮ ಶಿಕ್ಷಣ ಸಹಕಾರಿಯಾಗುವುದರ ಜೊತೆಗೆ ಇಡೀ ಮಾನವಕುಲಕ್ಕೆ ಒಳ್ಳೆಯದನ್ನು ಮಾಡುತ್ತದೆ ಎಂದು ತಿಳಿಸಿದರು.
ಸ್ವಾತಂತ್ರ್ಯದ ನಂತರ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಮತ್ತು ದೇಶದ ಆರ್ಥಿಕತೆಯು ಪ್ರಬಲವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ದೇಶವನ್ನು ಮತ್ತಷ್ಟು ಬಲಪಡಿಸುವ ಮೂಲಕ ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಮಾಡಲು ನಿರ್ಧರಿಸಲಾಗಿದೆ.
ಪರಿಸರ ಅಸಮತೋಲನ ಇಂದು ಜಗತ್ತಿನಲ್ಲಿ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ಮತ್ತು ಪ್ರಚಾರ ನಮೆಲ್ಲರ ಹೊಣೆಯಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಗೆ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಜಯದೇವ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಕುಲಪತಿ ಎನ್. ಕೆ ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ ಮುಂತಾದವರಿದ್ದರು., ಜಯದೇವ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಕುಲಪತಿ ಎನ್. ಕೆ ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ ಮುಂತಾದವರಿದ್ದರು.