ಬಿಜೆಪಿ ಸರ್ಕಾರದ ಹೊರೆಯನ್ನು ರಾಜ್ಯ ಭರಿಸುತ್ತಿದೆ: ಇಂಧನ ಬೆಲೆ ಏರಿಕೆಗೆ ಎಂ.ಲಕ್ಷ್ಮಣ್‌ ಸ್ಪಷ್ಟನೆ

Update: 2024-06-17 18:04 GMT

ಮೈಸೂರು: ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಚುನಾವಣೆ ದೃಷ್ಟಿಯಿಂದ ಪೆಟ್ರೋಲ್‌-ಡಿಸೇಲ್‌ನ ಬೆಲೆ ಕಡಿಮೆ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿತ್ತು. ಈಗ ಕಾಂಗ್ರೆಸ್‌ ಸರ್ಕಾರ ನಷ್ಟವನ್ನು ಭರಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಹೇಳಿದರು.

ನಗರದ ಇಂದಿರಾ ಗಾಂಧಿ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಕೇಂದ್ರದ ಸಚಿವೆ ನಿರ್ಮಲ ಸೀತಾರಾಮನ್‌ ಅವರು ಪೆಟ್ರೋಲ್‌-ಡಿಸೇಲ್‌ ಮೇಲೆ 3 ರೂ.ಕಡಿಮೆ ಮಾಡಿತ್ತು. ಆಯಾ ರಾಜ್ಯಗಳಲ್ಲಿ ವಿಧಿಸಿರುವ ತೆರಿಗೆಯನ್ನು ಕಡಿತಗೊಳಿಸಿದರು. ಆ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರವನ್ನು ಮೆಚ್ಚಿಸುವ ಸಲುವಾಗಿ ರಾಜ್ಯದ ತೆರಿಗೆಯಲ್ಲಿ 5 ರೂ.ಕಡಿತಗೊಳಿಸಿದರು. ಇದರಿಂದ 15,184 ಕೋಟಿ ರೂ.ರಾಜ್ಯಕ್ಕೆ ನಷ್ಟವಾಗಿದೆ. ಈ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರ ಮೌಲ್ಯಾಧಾರಿತ ತೆರಿಗೆಯನ್ನು ಪುನರ್‌ ಜಾರಿಗೆ ತಂದಿದೆ. ಇದು ರಾಜಕೀಯ ಪ್ರೇರಿತ ಬೆಲೆ ಏರಿಕೆಯಲ್ಲ ಎಂದರು.

ಪೆಟ್ರೋಲ್‌ ಬೆಲೆಯಲ್ಲಿ ಶೇ.3.92, ಡಿಸೇಲ್‌ ಮೇಲೆ ಶೇ.4ರಷ್ಟು ತೆರಿಗೆ ಹೆಚ್ಚಿಸಿದೆ. ಇದರಿಂದ 500 ಕೋಟಿ ರೂ.ರಾಜ್ಯ ಸರ್ಕಾರಕ್ಕೆ ಲಾಭವಾಗಲಿದೆ ಹೊರತು 3 ಸಾವಿರ ಕೋಟಿ ರೂ.ಅಲ್ಲ. ಆದರೆ, ಕೆಲವು ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಶೇ.29ರಷ್ಟು ಡಿಸೇಲ್‌ ಮೇಲೆ ಶೇ.18ರಷ್ಟು ಹೆಚ್ಚಿಸಿದ್ದಾರೆ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಆರ್‌.ಅಶೋಕ್‌ ವಿಪಕ್ಷದ ನಾಯಕ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು. ಬಿಜೆಪಿ ನಾಯಕರಿಗೆ ಕಿಂಚಿತ್ತು ಸಾಮಾನ್ಯಜ್ಞಾನ ಇದ್ದು, ಜನರ ಮೇಲೆ ಕಾಳಜಿ ಇದ್ದರೆ 2014ರಿಂದ 2024ರವರೆಗೆ ಪೆಟ್ರೋಲ್‌-ಡಿಸೇಲ್‌ ಮೇಲೆ 22 ಬಾರಿ ಬೆಲೆ ಏರಿಕೆ ಮಾಡಿರುವ ಕುರಿತು ಪ್ರಶ್ನಿಸಲಿ ಎಂದು ಸವಾಲು ಹಾಕಿದರು.

ಕಚ್ಚಾತೈಲ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರ 77 ರೂ.ಗೆ ಪೆಟ್ರೋಲ್‌, 55 ರೂ.ಡಿಸೇಲ್‌ ನೀಡುತ್ತಿತ್ತು. ಆದರೆ, ಇಂದು ಕಚ್ಚಾತೈಲ ಬೆಲೆ ಕುಸಿತವಾಗಿದೆ. ಹೀಗಾಗಿ 60 ರೂ.ಪೆಟ್ರೋಲ್‌ ನೀಡಬೇಕು. ಆದರೆ, 102 ರೂ.ಗೆ ನೀಡುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ 1 ಲೀಟರ್‌ ಗೆ 45.14 ರೂ.ಡಿಸೇಲ್‌ನಲ್ಲಿ 32 ರೂ.ಒಂದು ಲೀಟರ್‌ ಲಾಭ ಬರುತ್ತಿದೆ.

ಇದರಿಂದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ರೂ.40 ಲಕ್ಷ ಕೋಟಿ ಲಾಭ ಬಂದಿದೆ. ಕೇಂದ್ರ ಸರ್ಕಾರ ವಿಧಿಸಿರುವ ತೆರಿಗೆಯಲ್ಲಿ 20 ರೂ.ಕಡಿಮೆ ಮಾಡಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೇಂದ್ರಕ್ಕೆ ಆಗ್ರಹಿಸಲಿ ಎಂದರು.

ಬಿಜೆಪಿ ಆಡಳಿತದಲ್ಲಿರುವ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿ ಪೆಟ್ರೋಲ್‌-ಡಿಸೇಲ್‌ ಬೆಲೆ 7 ರೂ.ಕಡಿಮೆ ಇದೆ. ಯಾರ ಅವಧಿಯಲ್ಲಿ ಇಂಧನ ಬೆಲೆಗಳು ಹೆಚ್ಚಾಗಿದ್ದವು. ಯಾವುದು ಎಷ್ಟಿತ್ತು ಎಂಬುದರ ಕುರಿತು ಬಿಜೆಪಿ-ಜೆಡಿಎಸ್‌ ನಾಯಕರು ನನ್ನೊಂದಿಗೆ ಚರ್ಚೆಗೆ ಬರಲಿ ಎಂದ ಅವರು ಇಂಧನದ ಮೇಲೆ ಕೇಂದ್ರ ವಿಧಿಸಿರುವ ತೆರಿಗೆಯನ್ನು ಕಡಿತಗೊಳಿಸುವಂತೆ ರಾಜ್ಯಾದಾದ್ಯಂತ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.

ಈ ಹಿಂದೆ ಪೆಟ್ರೋಲ್‌-ಡಿಸೇಲ್‌ ಬೆಲೆ ನಿರಂತರವಾಗಿ ಏರಿಕೆಯಾಗಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಳ್‌ ಪ್ರತಿಭಟಿಸುವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದರು. ಈಗ ಅವರು ಮತ್ತೊಮ್ಮೆ ಅದೇ ಮಾತನ್ನು ಹೇಳಬೇಕು. ನಾವು ಈ ಮಾತನ್ನು ಹೇಳುವುದಿಲ್ಲ. ಚುನಾವಣೆಗೊಸ್ಕರ ಭಾರತೀಯರನ್ನು ಅವಮಾನಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವನಾದ ತಕ್ಷಣ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. 16 ತಿಂಗಳು ಮುಖ್ಯಮಂತ್ರಿಯಾದಾಗ ಶೇ.35ರಷ್ಟು ತೆರಿಗೆ ವಿಧಿಸಿದ್ದರು. 9 ಬಾರಿ ವಿದ್ಯುತ್‌ ದರ ಹೆಚ್ಚಿಸಿದ್ದರು ಎಂದು ಹೇಳಿದರು.

ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌, ನಗರ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಜ ರಾಜೇಂದ್ರ, ಸೇವಾ ದಳದ ಗಿರೀಶ್‌, ಜಿಲ್ಲಾ ಕಾಂಗ್ರೆಸ್‌ ಸದಸ್ಯರಾದ ಚಂದ್ರು, ಶ್ರೀನಿವಾಸ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News