ರೆಸಾರ್ಟ್ ರಾಜಕೀಯದ ಬೆನ್ನಲ್ಲೇ ನಡ್ಡಾ- ವಸುಂಧರ ರಾಜೇ ಭೇಟಿ

Update: 2023-12-08 02:25 GMT

ಹೊಸದಿಲ್ಲಿ: ರಾಜಸ್ಥಾನದ ಮುಖ್ಯಮಂತ್ರಿ ಆಯ್ಕೆಗೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ ಅವರು ಗುರುವಾರ ರಾತ್ರಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜಸ್ಥಾನದ ಕೆಲ ಶಾಸಕರು ರೆಸಾರ್ಟ್  ನಲ್ಲಿ ವಾಸ್ತವ್ಯ ಹೂಡಿರುವ ವರದಿಗಳ ಬೆನ್ನಲ್ಲೇ, ರಾಜ್ಯ ರಾಜಕೀಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ.

ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸುವ ಮುನ್ನ ವಸುಂಧರರಾಜೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ಅಧ್ಯಕ್ಷರು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ವಸುಂಧರರಾಜೇ ಅವರನ್ನು ಕರೆಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ರಾಜೇ ಅವರ ಅಭಿಪ್ರಾಯಗಳು ಆಯ್ಕೆ ನಿರ್ಧಾರದಲ್ಲಿ ಪ್ರಮುಖ ಎಂದು ವಿಶ್ಲೇಷಿಸಲಾಗುತ್ತಿದೆ.

ಜೈಪುರದ ಹೊರವಲಯದ ರೆಸಾರ್ಟ್ ನಲ್ಲಿ ಕೆಲ ಬಿಜೆಪಿ ಶಾಸಕರು ಠಿಕಾಣಿ ಹೂಡಿದ ಬೆನ್ನಲ್ಲೇ, ಬುಧವಾರ ರಾತ್ರಿ ದೆಹಲಿಗೆ ಆಗಮಿಸಿದ್ದ ರಾಜೇ, ಗುರುವಾರ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದರು. ಏತನ್ಮಧ್ಯೆ ಶಾಸಕ ಲಲಿತ್ ಮೀನಾ ಅವರ ತಂದೆ ಹೇಳಿಕೆ ನೀಡಿ, ಕಿಶನ್ ಗಂಜ್ ನಿಂದ ಆಯ್ಕೆಯಾದ ನೂತನ ಶಾಸಕರನ್ನು ಇತರ ಶಾಸಕರು ಅಕ್ರಮವಾಗಿ ಕೂಡಿಹಾಕಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಬಗ್ಗೆ ವರಿಷ್ಠರಿಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಮೀನಾ ಅವರನ್ನು ಬುಧವಾರ ಕರೆ ತರಲಾಗಿದೆ. ವಸುಂಧರ ರಾಜೇ ಅವರ ಮಗ ಹಾಗೂ ಸಂಸದ ದುಷ್ಯಂತ್ ಸಿಂಗ್ ಅವರು ತಮ್ಮ ಮಗ ಹಾಗೂ ಜಲ್ವಾರ್ ಹಾಗೂ ಬರ್ರಾದ ಇತರ ಐದು ಮಂದಿ ಶಾಸಕರನ್ನು ರೆಸಾರ್ಟ್ ನಲ್ಲಿ ಕೂಡಿಹಾಕಿದ್ದಾರೆ ಎಂದು ಲಲಿತ್ ಮೀನಾ ಅವರ ತಂದೆ ದೂರು ನೀಡಿದ್ದರು.

ಈ ಬಗ್ಗೆ ಮಾಹಿತಿ ಬಂದ ತಕ್ಷಣ ತಾವು ರಾಜಸ್ಥಾನದ ಅಪ್ನೋ ರೆಸಾರ್ಟ್ ಗೆ ಧಾವಿಸಿ ಮಗನನ್ನು ಮನೆಗೆ ಕರೆ ತಂದಿರುವುದಾಗಿ ಬಿಜೆಪಿಯ ಮಾಜಿ ಶಾಸಕರೂ ಆದ ಹೇಮರಾಜ್ ಮೀನಾ ಬಹಿರಂಗಪಡಿಸಿದ್ದಾರೆ. ಆದರೆ ದುಷ್ಯಂತ್ ಸಿಂಗ್ ಅವರ ಜತೆ ಚರ್ಚಿಸಿದ ಬಳಿಕವಷ್ಟೇ ಮಗನನ್ನು ಕರೆದೊಯ್ಯಲು ಅವಕಾಶ ನೀಡುವುದಾಗಿ ಬಿಜೆಪಿ ಶಾಸಕ ಕನ್ವರ್ ಲಾಲ್ ಹೇಳಿದ್ದಾಗಿ ಮೀನಾ ದೂರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News