ಬಾಂಗ್ಲಾ ವಿದ್ಯಾರ್ಥಿ ಪ್ರತಿಭಟನೆಯಲ್ಲಿ 105 ಮಂದಿ ಮೃತ್ಯು: 300 ಭಾರತೀಯ ವಿದ್ಯಾರ್ಥಿಗಳು ವಾಪಾಸು

Update: 2024-07-20 02:50 GMT

ಪ್ರತಿಭಟನಾನಿರತ ವಿದ್ಯಾರ್ಥಿಗಳು ಮತ್ತು ಭದ್ರತಾ ಪಡೆ PC: x.com/academiamag

ಅಗರ್ತಲ: ಒಂದು ವಾರದಿಂದ ವಿದ್ಯಾರ್ಥಿ ಪ್ರತಿಭಟನೆ ನಡೆಯುತ್ತಿರುವ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳು ಶುಕ್ರವಾರ ಈಶಾನ್ಯ ಗಡಿಯ ಮೂಲಕ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಮತ್ತು ಭದ್ರತಾ ಪಡೆಗಳ ನಡುವಿನ ಸಂಘರ್ಷದಲ್ಲಿ ಇದುವರೆಗೆ 105ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಪುನರಾರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.

ಮೂರು ವಾರಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರ ಸ್ವರೂಪ ಪಡೆದು ಢಾಕಾ ವಿವಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮರುದಿನ ಆರು ಮಂದಿ ಪ್ರತಿಭಟನಾಕಾರರು ಮೃತಪಟ್ಟ ಬೆನ್ನಲ್ಲೇ ಹಿಂಸಾಚಾರ ವ್ಯಾಪಕವಾಗಿತ್ತು. ದೇಶಾದ್ಯಂತ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಮಚ್ಚಲು ಸರ್ಕಾರ ಆದೇಶಿಸಿದೆ.

ಭಾರತಕ್ಕೆ ವಾಪಸ್ಸಾಗಿರುವ ಬಹುತೇಕ ವಿದ್ಯಾರ್ಥಿಗಳು ಉತ್ತರ ಪ್ರದೇಶ, ಹರ್ಯಾಣ, ಮೇಘಾಲಯ ಮತ್ತು ಜಮ್ಮು & ಕಾಶ್ಮೀರ ಮೂಲದವರಾಗಿದ್ದು, ಬಾಂಗ್ಲಾದೇಶದಲ್ಲಿ ಎಂಬಿಬಿಎಸ್ ಪದವಿ ಪಡೆಯುತ್ತಿದ್ದರು. ಅಗರ್ತಲ ಬಳಿಕ ಅಖುರ್ ಗಡಿಯ ಮೂಲಕ ಬಹುತೇಕ ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ.

ಸಾಕಷ್ಟು ಕಾಲ ಕಾದ ಬಳಿಕ ಅಂತಿಮವಾಗಿ ಬಾಂಗ್ಲಾದೇಶವನ್ನು ತೊರೆಯಲು ನಿರ್ಧರಿಸಿದ್ದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಇಂಟರ್ನೆಟ್ ಕಡಿತಗೊಳಿಸಲಾಗಿದ್ದು, ದೂರಸಂಪರ್ಕ ಸೇವೆ ಅಸ್ತವ್ಯಸ್ತವಾಗಿದೆ. ಕುಟುಂಬದ ಜತೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ವಾಪಸ್ಸಾಗುವ ನಿರ್ಧಾರಕ್ಕೆ ಬಂದಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News