2014 ರ ಬಳಿಕ ಎನ್‌ಡಿಎ ಸೇರಿದ 25 ಪ್ರಮುಖ ವಿಪಕ್ಷ ನಾಯಕರ ಪೈಕಿ 23 ಮಂದಿಯ ವಿರುದ್ಧದ ತನಿಖೆ ರದ್ದು: ವರದಿ
ಹೊಸದಿಲ್ಲಿ: ಕೇಂದ್ರೀಯ ತನಿಖಾ ಏಜನ್ಸಿಗಳಿಂದ ಕ್ರಮ ಎದುರಿಸುತ್ತಿದ್ದ ವಿಪಕ್ಷಗಳ ಪ್ರಮುಖ 25 ರಾಜಕಾರಣಿಗಳ ಪೈಕಿ 23 ಮಂದಿ ಬಿಜೆಪಿ ಅಥವಾ ಅದರ ಎನ್‌ಡಿಎ ಮಿತ್ರ ಪಕ್ಷಗಳನ್ನು ಸೇರಿಕೊಂಡ ನಂತರ ಅವರ ವಿರುದ್ಧದ ತನಿಖೆಯನ್ನು ಕೈಬಿಡಲಾಯಿತು ಅಥವಾ ರದ್ದುಪಡಿಸಲಾಯಿತು ಎಂದು The Indian Express ವರದಿ ಮಾಡಿದೆ.
ಆದರೆ ಮಾಜಿ ಕಾಂಗ್ರೆಸ್ ಸಂಸದ ಜ್ಯೋತಿ ಮಿರ್ಧಾ ಹಾಗೂ ತೆಲುಗುದೇಶಂ ಪಕ್ಷದ ಮಾಜಿ ಸಂಸದ ವೈ ಎಸ್ ಚೌಧುರಿ ವಿರುದ್ಧ ತನಿಖೆ ಕೈಬಿಟ್ಟಿರುವ ಅಥವಾ ಪ್ರಕರಣ ಮುಚ್ಚಿರುವ ಯಾವುದೇ ಮಾಹಿತಿ ಇಲ್ಲ ಎಂದು ವರದಿ ತಿಳಿಸಿದೆ.
ಬಿಜೆಪಿ ಅಥವಾ ಅದರ ಎನ್‌ಡಿಎ ಮಿತ್ರ ಪಕ್ಷಗಳನ್ನು 2014ರಿಂದೀಚೆಗೆ ಸೇರಿದ 25 ರಾಜಕಾರಣಿಗಳ ಹೆಸರುಗಳು ಇಂತಿವೆ.
ಕಾಂಗ್ರೆಸ್‌ನಿಂದ ಹತ್ತು ಮಂದಿ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ, ರಣೀಂದರ್ ಸಿಂಗ್, ಕೃಪಾಶಂಕರ್ ಸಿಂಗ್, ಗೋವಾದ ಮಾಜಿ ಸಿಎಂ ದಿಗಂಬರ್ ಕಾಮತ್, ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್, ನವೀನ್ ಜಿಂದಾಲ್, ಅರ್ಚನಾ ಪಾಟೀಲ್, ಗೀತಾ ಕೋಡಾ, ಬಾಬಾ ಸಿದ್ದೀಖಿ ಮತ್ತು ಜ್ಯೋತಿ ಮಿರ್ಧಾ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಲ್ಕು ಮಂದಿ: ಅಜಿತ್ ಪವಾರ್, ಪ್ರಫುಲ್ ಪಟೇಲ್, ಛಗನ್ ಭುಜಬಲ್, ಹಸನ್ ಶರೀಫ್. ಈ ನಾಲ್ಕು ಮಂದಿಯೂ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾ ಯುತಿ ಮೈತ್ರಿ ಸೇರಿದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯವರು.
ಶಿವಸೇನೆಯ ನಾಲ್ಕು ಮಂದಿ: ಯಾಮಿನಿ ಜಾಧವ್, ಯಶವಂತ್ ಜಾಧವ್, ಭಾವನಾ ಗವಾಲಿ, ಪ್ರತಾಪ್ ಸರ್ನಾಯಕ್. ಎಲ್ಲರೂ ಬಿಜೆಪಿ ಜೊತೆ ಮೈತ್ರಿ ಸಾಧಿಸಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯವರು.
ತೃಣಮೂಲ ಕಾಂಗ್ರೆಸ್ ಪಕ್ಷದ ಮೂವರು: ಸುವೇಂಧು ಅಧಿಕಾರಿ, ತಪಸ್ ರಾಯ್ ಮತ್ತು ಸೋವನ್ ಚಟರ್ಜಿ.
ತೆಲುಗು ದೇಶಂ ಪಕ್ಷದ ಇಬ್ಬರು: ಸುಜನಾ ಚೌಧರಿ ಮತ್ತು ಸಿಎಂ ರಮೇಶ್
ಸಮಾಜವಾದಿ ಪಕ್ಷ: ಸಂಜಯ್ ಸೇಠ್
ವೈಎಸ್ಸಾರ್ ಕಾಂಗ್ರೆಸ್: ಕೆ ಗೀತಾ
ಮೇಲಿನವರ ಪೈಕಿ ಆರು ವಿಪಕ್ಷ ನಾಯಕರು ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೇರಿದ್ದಾರೆ.
ಕೇಂದ್ರೀಯ ಏಜನ್ಸಿಗಳ ಹೆಚ್ಚಿನ ಕ್ರಮ ಮಹಾರಾಷ್ಟ್ರದ ರಾಜಕಾರಣಿಗಳ ವಿರುದ್ಧವಾಗಿತ್ತು. ಇದು ಅಲ್ಲಿನ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು 2022ರಲ್ಲಿ ಉರುಳಿಸುವಲ್ಲಿ ಹಾಗೂ ನಂತರ ಶಿವಸೇನೆ ಮತ್ತು ಎನ್‌ಸಿಪಿಯನ್ನು ಇಬ್ಭಾಗವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಸಿಬಿಐ ಕಳೆದ ವಾರ ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ ಅವರು ಶಾಮೀಲಾಗಿದ್ದ ಏರ್ ಇಂಡಿಯಾಗೆ ವಿಮಾನಗಳನ್ನು ಲೀಸ್ ನೀಡಿದ್ ಪ್ರಕರಣವನ್ನು ಮುಚ್ಚಿತ್ತು. ಪಟೇಲ್ ಸಹಿತ ಕೆಲ ಹಿರಿಯ ನಾಯಕರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ವಲಸೆ ಹೋದ ಏಳು ತಿಂಗಳ ನಂತರದ ಬೆಳವಣಿಗೆ ಇದಾಗಿದೆ.
ತಮ್ಮ ಪಕ್ಷ ಕೇಂದ್ರೀಯ ತನಿಖಾ ಏಜನ್ಸಿಗಳಿಂದ ತನಿಖೆ ಎದುರಿಸುತ್ತಿರುವವರ ಸಹಿತ ಎಲ್ಲರನ್ನೂ ಸ್ವಾಗತಿಸುವುದಾಗಿ ಕಳೆದ ವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.