ನಾಳೆ (ಮೇ 30) ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ: ಕಾವಲು ಕಾಯಲಿರುವ 2,000 ಪೋಲಿಸರು

Update: 2024-05-29 16:26 GMT

ಪ್ರಧಾನಿ ನರೇಂದ್ರ ಮೋದಿ (File Photo: PTI)

ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರದಿಂದ ಇಲ್ಲಿ 45 ಗಂಟೆಗಳ ವಾಸ್ತವ್ಯವನ್ನು ಹೂಡಲಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಸೇರಿದಂತೆ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಗುರುವಾರ ಸಂಜೆಯಿಂದ ಶನಿವಾರ ಸಂಜೆಯವರೆಗೆ ಅವರು ತನ್ನ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು ‘ಭಾರತ ಮಾತೆ’ಯ ಕುರಿತು ದೈವಿಕ ನೋಟವನ್ನು ಹೊಂದಿದ್ದರು ಎಂದು ನಂಬಲಾಗಿರುವ ಧ್ಯಾನ ಮಂಟಪಂನಲ್ಲಿ ಧ್ಯಾನವನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ 2,000 ಪೋಲಿಸರು ಕಾವಲು ಕಾಯಲಿದ್ದಾರೆ.

ಐದು ವರ್ಷಗಳ ಹಿಂದೆ 2019ರ ಲೋಕಸಭಾ ಚುನಾವಣೆಗಳ ಪ್ರಚಾರವು ಅಂತ್ಯಗೊಂಡ ಬಳಿಕ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನಕ್ಕೆ ಕುಳಿತಿದ್ದರು. ಇದೀಗ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವೂ ಆಗಿರುವ ಕನ್ಯಾಕುಮಾರಿ ಜಿಲ್ಲಾಡಳಿತವು ಕಟ್ಟೆಚ್ಚರವನ್ನು ವಹಿಸಿದೆ.

ತಿರುನೆಲ್ವೆಲಿ ಡಿಐಜಿ ಪ್ರವೇಶ ಕುಮಾರ ಮತ್ತು ಕನ್ಯಾಕುಮಾರಿ ಎಸ್‌ಪಿ ಇ.ಸುಂದರವದನಂ ಅವರು ಶಿಲಾ ಸ್ಮಾರಕ,ಬೋಟ್ ಜೆಟ್ಟಿ,ಹೆಲಿಪ್ಯಾಡ್ ಮತ್ತು ಸರಕಾರಿ ಅತಿಥಿ ಗೃಹಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಪ್ರಧಾನಿಯವರ ಮುಖ್ಯ ಭದ್ರತಾ ತಂಡವೂ ಸ್ಥಳಕ್ಕೆ ಆಗಮಿಸಿದ್ದು, ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ರಯೋಗವನ್ನು ನಡೆಸಿದೆ.

ಹಿಂದು ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸಂಗಮಗೊಳ್ಳುವ ಸ್ಥಳಕ್ಕೆ ಸಮೀಪದ ತೀರದಲ್ಲಿರುವ ಶ್ರೀ ಭಗವತಿ ಅಮ್ಮನ್ ದೇವಸ್ಥಾನ,ತಮಿಳು ಸಂತಕವಿ ತಿರುವಳ್ಳುವರ್ ಪ್ರತಿಮೆ ಮತ್ತು ಸ್ವಚ್ಛ ಬೀಚ್ ಇಲ್ಲಿಯ ಸೌಂದರ್ಯವನ್ನು ಹೆಚ್ಚಿಸಿವೆ.

ಶಿಲೆಯನ್ನು ಬಣ್ಣಿಸಿರುವ ಕನ್ಯಾಕುಮಾರಿ ಜಿಲ್ಲಾಡಳಿತದ ವೆಬ್‌ಸೈಟ್, ಐತಿಹ್ಯದ ಪ್ರಕಾರ ದೇವಿ ಕನ್ಯಾಕುಮಾರಿ ಈ ಶಿಲೆಯ ಮೇಲೆ ತಪಸ್ಸು ಮಾಡಿದ್ದರು ಎಂದು ಹೇಳಿದೆ.

ತಾತ್ಕಾಲಿಕ ವೇಳಾಪಟ್ಟಿಯಂತೆ ಮೋದಿ ಮೇ 30ರಂದು ಅಪರಾಹ್ನ ಕನ್ಯಾಕುಮಾರಿಗೆ ಆಗಮಿಸುವ ನಿರೀಕ್ಷೆಯಿದ್ದು, ಬಳಿಕ ವಿವೇಕಾನಂದ ಶಿಲಾ ಸ್ಮಾರಕಕ್ಕೆ ತೆರಳಲಿದ್ದಾರೆ. ಅಂತಿಮ ಹಂತದ ಲೋಕಸಭಾ ಚುನಾವಣೆಯ ದಿನವಾದ ಜೂನ್ 1ರಂದು ಸಂಜೆಯವರೆಗೆ ಅವರು ಅಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಯಿದೆ.

ಮೋದಿಯವರ ವಾಸ್ತವ್ಯದ ಹಿನ್ನೆಲೆಯಲ್ಲಿ ಕರಾವಳಿ ಭದ್ರತಾ ಪಡೆ,ಭಾರತೀಯ ತಟರಕ್ಷಣಾ ಪಡೆ ಮತ್ತು ಭಾರತೀಯ ನೌಕಾಪಡೆ ಸಮುದ್ರ ಗಡಿಗಳಲ್ಲಿ ಕಟ್ಟೆಚ್ಚರವನ್ನು ವಹಿಸಿವೆ.

ಸ್ವಾಮಿ ವಿವೇಕಾನಂದ ಅವರು ದೇಶಾದ್ಯಂತ ತಿರುಗಾಟದ ಬಳಿಕ ಇಲ್ಲಿಗೆ ಆಗಮಿಸಿದ್ದು,ಮೂರು ದಿನಗಳ ಕಾಲ ಧ್ಯಾನವನ್ನು ಮಾಡಿದ್ದರು. ಅಂದಿನಿಂದ ಈ ತಾಣವು ವಿವೇಕಾನಂದ ಶಿಲಾ ಸ್ಮಾರಕ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News