ಸಂಭಲ್ ಘರ್ಷಣೆ | ಘಟನೆ ನಡೆದು 3 ತಿಂಗಳು ಕಳೆದರೂ ಮನೆಗೆ ಮರಳಿ ಬರದ ಸ್ಥಳೀಯ ನಿವಾಸಿಗಳು!

Update: 2025-02-16 12:28 IST
ಸಂಭಲ್ ಘರ್ಷಣೆ | ಘಟನೆ ನಡೆದು 3 ತಿಂಗಳು ಕಳೆದರೂ ಮನೆಗೆ ಮರಳಿ ಬರದ ಸ್ಥಳೀಯ ನಿವಾಸಿಗಳು!

Photo credit: PTI

  • whatsapp icon

ಲಕ್ನೋ : ಉತ್ತರಪ್ರದೇಶದ ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವೇಳೆ ನಡೆದ ಹಿಂಸಾಚಾರದ ಬಳಿಕ ಸ್ಥಳೀಯರು ತಮ್ಮ ಸ್ವಂತ ಮನೆಗಳನ್ನು ತೊರೆದಿದ್ದಾರೆ. ಸಂಭಲ್ ನ ತಮ್ಮ ಮೂಲ ಸ್ಥಳಕ್ಕೆ ಬರಲು ಭಯ ಪಡುತ್ತಿದ್ದಾರೆ. ಇದರಿಂದಾಗಿ ಹಿಂಸಾತ್ಮಕ ಪ್ರತಿಭಟನೆ ನಡೆದು ಮೂರು ತಿಂಗಳು ಕಳೆದರೂ ಸರಿಸುಮಾರು 1,000 ಮನೆಗಳು ಕಳೆದ ಮೂರು ತಿಂಗಳಿನಿಂದ ಬೀಗ ಹಾಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ನವೆಂಬರ್ 24ರಂದು ಸಂಭಲ್ ನ ಕೋಟ್ ಗಾರ್ವಿ ಪ್ರದೇಶದಲ್ಲಿನ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ವೇಳೆ ನಡೆದ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಹಿಂಸಾಚಾರದ ಬಳಿಕ ಸ್ಥಳೀಯರು ತಮ್ಮ ಸ್ವಂತ ಮನೆಗಳನ್ನು ತೊರೆದಿದ್ದಾರೆ. ಕೆಲವು ಸ್ಥಳೀಯರು ಬೀಗ ಹಾಕಿರುವ ತಮ್ಮ ಮನೆಗಳ ಹೊರಗೆ ಪತ್ರಗಳನ್ನಿಟ್ಟಿದ್ದಾರೆ. ಪತ್ರದಲ್ಲಿ ತಾವು ಏಕೆ ಮನೆ ತೊರೆದಿದ್ದೇವೆ ಎಂಬುವುದನ್ನು ಉಲ್ಲೇಖಿಸಿದ್ದಾರೆ. ಓರ್ವ ವ್ಯಕ್ತಿಯು, ಕುಟುಂಬದ ಸದಸ್ಯರೋರ್ವರ ಕ್ಯಾನ್ಸರ್ ಚಿಕಿತ್ಸೆಗೆ ದಿಲ್ಲಿಗೆ ತೆರಳಿರುವುದಾಗಿ ಹೇಳಿದರೆ, ಇನ್ನೋರ್ವರು ಮನೆಯ ಮೇಲೆ ಬ್ಯಾಂಕ್ ಸಾಲ ತೆಗೆದುಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ.

ಹಿಂದ್ ಪುರ, ಕೋಟ್ ಗಾರ್ವಿ, ನಖಾಸಾ ಮತ್ತು ದೀಪಾ ಸರೈ ಮುಂತಾದ ಪ್ರದೇಶಗಳಲ್ಲಿ ಜನರು ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ. ಈ ಕುರಿತು ಮಾಹಿತಿಯನ್ನು ಕಲೆಹಾಕಲು ಕೆಲ ಪೊಲೀಸರ ತಂಡ ದಿಲ್ಲಿಗೆ ತೆರಳಿದೆ.

ಪೊಲೀಸರು ಹೇಳುವುದೇನು?

ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವೇಳೆ ನಡೆದ ಹಿಂಸಾಚಾರದ ಬಳಿಕ ಜನರು ತಮ್ಮ ಮನೆಗಳನ್ನು ತೊರೆದಿರುವ ಬಗ್ಗೆ ಪೊಲೀಸರು ದೃಢಪಡಿಸಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರೂ, ಹಲವು ಕುಟುಂಬಗಳು ಬಂಧನದ ಭೀತಿಯಿಂದ ಮನೆಗಳನ್ನು ತೊರೆದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಸಂಭಲ್ ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್ ಪ್ರತಿಕ್ರಿಯಿಸಿ, ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದ ಪ್ರದೇಶದಲ್ಲಿ ಸುಮಾರು 1,000 ಮನೆಗಳಿಗೆ ಬೀಗ ಹಾಕಲಾಗಿದೆ. ಅಮಾಯಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನಾವು ಭರವಸೆ ನೀಡುತ್ತಿದ್ದೇವೆ. ಕೆಲವು ಸ್ಥಳೀಯರು ತಮ್ಮ ಮನೆಗಳ ಹೊರಗೆ ಪತ್ರಗಳನ್ನು ಇಟ್ಟಿರುವ ಬಗ್ಗೆ ನನಗೆ ತಿಳಿದಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರಕಾರವು ಹಿಂಸಾಚಾರದಲ್ಲಿ ಉಂಟಾದ ಸಾರ್ವಜನಿಕ ಆಸ್ತಿ-ಪಾಸ್ತಿಯ ಹಾನಿಯ ವೆಚ್ಚವನ್ನು ಮೌಲ್ಯಮಾಪನ ಮಾಡುತ್ತಿದೆ. ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಸಾರಿಗೆ, ಪೊಲೀಸ್ ಮತ್ತು ಇತರ ಸಂಬಂಧಿತ ಇಲಾಖೆಗಳಿಂದ ವರದಿಯನ್ನು ಕೇಳಲಾಗಿದೆ. ಮುಂದಿನ ವಾರದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ನಷ್ಟ ವಸೂಲಾತಿಗಾಗಿ ಆರೋಪಿಗಳಿಗೆ ನೋಟಿಸ್‌ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂಭಲ್ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ 76 ಜನರನ್ನು ಬಂಧಿಸಿದ್ದಾರೆ, ಬಂಧಿತ ಆರೋಪಿಗಳ ವಿರುದ್ಧ ಶೀಘ್ರದಲ್ಲೇ ಚಾರ್ಜ್ ಶೀಟ್‌ ಅನ್ನು ಸಲ್ಲಿಸುತ್ತೇವೆ ಎಂದು ಸಂಭಲ್‌ ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಹೇಳಿದ್ದಾರೆ.

12 ಎಫ್ ಐರ್‌ಗಳು ದಾಖಲು :

ಸಂಭಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಹನ್ನೆರಡು ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. 76 ಜನರನ್ನು ಬಂಧಿಸಿದ್ದಾರೆ. 86 ಜನರ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ಇವರಲ್ಲಿ 21 ಜನರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ಆರೋಪಿಗಳ ಬಗ್ಗೆ ವಿವರ ನೀಡಿದ ವ್ಯಕ್ತಿಗಳಿಗೆ ಪೊಲೀಸರು ಬಹುಮಾನವನ್ನು ಘೋಷಿಸಿದ್ದಾರೆ. ಪೊಲೀಸರು ಈಗಾಗಲೇ ಸುಮಾರು 250 ಮಂದಿಯ ಫೋಟೊವನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಿಡುಗಡೆ ಮಾಡಿದ್ದಾರೆ. ಹಿಂಸಾಚಾರದಲ್ಲಿ ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಸ್ಥಳೀಯ ದರೋಡೆಕೋರರ ಪಾತ್ರದ ಬಗ್ಗೆ ಕೂಡ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News