ಆರೋಗ್ಯ, ಔಷಧ ಕ್ಷೇತ್ರದ 30 ಕಂಪನಿಗಳಿಂದ 900 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿ

Update: 2024-03-15 07:26 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ದೇಶದ 30 ಔಷಧ ತಯಾರಿಕಾ ಕಂಪನಿಗಳು ಮತ್ತು ಆರೋಗ್ಯಸೇವಾ ಸಂಸ್ಥೆಗಳು 900 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‍ಗಳನ್ನು ಖರೀದಿಸಿವೆ. ಇವು ತಲಾ 5 ಕೋಟಿ ರೂಪಾಯಿ ಮೌಲ್ಯದ ಬಾಂಡ್‍ಗಳಾಗಿವೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಕಳೆದ ಐದು ವರ್ಷಗಳಲ್ಲಿ ಒಟ್ಟು 12,155 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‍ಗಳು ಖರೀದಿಯಾಗಿದ್ದು, ಈ ಪೈಕಿ ಔಷಧ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ಪಾಲು ಶೇಕಡ 7.4ರಷ್ಟಿದೆ.

ಹೈದರಾಬಾದ್‍ನ ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ (ರೂ. 152 ಕೋಟಿ) ಅಗ್ರಸ್ಥಾನಿಯಾಗಿದೆ. ಡಾ.ರೆಡ್ಡೀಸ್ ಲ್ಯಾಬೋರೇಟರಿ (80 ಕೋಟಿ), ಅಹ್ಮದಾಬಾದ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ರೊರೆಂಟ್ ಫಾರ್ಮಸ್ಯೂಟಿಕಲ್ಸ್ (77.5 ಕೋಟಿ), ಹೈದರಾಬಾದ್ ಮೂಲದ ನ್ಯಾಟ್ಕೊ ಫಾರ್ಮಾ (69.25 ಕೋಟಿ) ಮತ್ತು ಹೈದರಾಬಾದ್ ಮೂಲಕದ ಹೆಟೆರೊ ಫಾರ್ಮಾ ಮತ್ತು ಅದರ ಸಹ ಸಂಸ್ಥೆಗಳು ನಂತರದ ಸ್ಥಾನಗಳಲ್ಲಿವೆ. ಬಯೋಕಾನ್ ಲಿಮಿಟೆಡ್ ಸಂಸ್ಥಾಪಕಿ ಕಿರಣ್ ಮಜೂಂದಾರ್ ಶಾ 6 ಕೋಟಿ ಮೌಲ್ಯದ ಬಾಂಡ್ ಖರೀದಿಸಿದ್ದಾರೆ. ಸಿಪ್ಲಾ 39.2 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿದೆ.

ಅತಿದೊಡ್ಡ ಖರೀದಿದಾರರಾದ ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ 80 ಬಾಂಡ್‍ಗಳನ್ನು ಆರು ಸಂದರ್ಭಗಳಲ್ಲಿ ಖರೀದಿಸಿದೆ. 2022ರ ಏಪ್ರಿಲ್‍ನಲ್ಲಿ ಒಂದೇ ಬಾರಿಗೆ 80 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿದೆ. ಆದರೆ ಇದು ಹೈದರಾಬಾದ್ ಮೂಲದ ಸಂಸ್ಥೆಯೇ ಅಥವಾ ಗಾಝಿಯಾಬಾದ್ ಮೂಲದ ಸಂಸ್ಥೆಯೇ ಎನ್ನುವುದು ಖಚಿತವಾಗಿಲ್ಲ. ಎರಡೂ ಸಂಸ್ಥೆಗಳು ಒಂದೇ ಹೆಸರಿನಲ್ಲಿವೆ.

ಹೆಟೆರೊ ಫಾರ್ಮಾ 2022ರ ಎಪ್ರಿಲ್‍ನಲ್ಲಿ ಮತ್ತು ಜುಲೈನಲ್ಲಿ, 2023ರ ಅಕ್ಟೋಬರ್ ನಲ್ಲಿ ಚುನಾವಣಾ ಬಾಂಡ್ ಖರೀದಿಸಿದೆ. ಕುತೂಹಲದ ಅಂಶವೆಂದರೆ ಇದಕ್ಕೂ ಮುನ್ನ ಕಂಪನಿ ಬಳಿ 550 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ಹಣ ಇದೆ ಎಂಬ ಆರೋಪದಲ್ಲಿ ಈ ಕಂಪನಿಯ ಕಚೇರಿಗಳ ಮೇಲೆ ದಾಳಿ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News