ಯೆಮನ್‍ನ ಹೌದಿ ಬಂಡುಗೋರರ ವಶದಲ್ಲಿ ವಿಶ್ವಸಂಸ್ಥೆಯ 9 ಸಿಬ್ಬಂದಿ ; ವರದಿ

Update: 2024-06-07 17:28 GMT

PC : indiatoday  ಸಾಂದರ್ಭಿಕ ಚಿತ್ರ

ಸನಾ : ಯೆಮನ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆ ಏಜೆನ್ಸಿಗಳ ಕನಿಷ್ಟ 9 ಸಿಬ್ಬಂದಿ ಯೆಮನ್‍ನ ಹೌದಿ ಬಂಡುಗೋರರ ವಶದಲ್ಲಿರುವುದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಅಮೆರಿಕ ನೇತೃತ್ವದ ಮಿತ್ರದೇಶಗಳ ವಾಯುದಾಳಿ ಹೆಚ್ಚಿದ ಬಳಿಕ ಹೌದಿ ಸಶಸ್ತ್ರ ಹೋರಾಟ ಪಡೆಗೆ ಆರ್ಥಿಕ ಸಂಪನ್ಮೂಲಗಳ ಕೊರತೆ ಎದುರಾಗಿದೆ ಎಂಬ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ವಿಶ್ವಸಂಸ್ಥೆ ಅಥವಾ ಹೌದಿಗಳು ಪ್ರತಿಕ್ರಿಯಿಸಿಲ್ಲ.

ಇರಾನ್ ಬೆಂಬಲಿತ, ಯೆಮನ್ ಮೂಲದ ಹೌದಿಗಳು ದಶಕದ ಹಿಂದೆ ಯೆಮನ್ ರಾಜಧಾನಿ ಸನಾವನ್ನು ಕೈವಶ ಮಾಡಿಕೊಂಡಿದ್ದು ಹೌದಿಗಳನ್ನು ಹಿಮ್ಮೆಟ್ಟಿಸುವ ಯೆಮನ್ ಸರಕಾರಿ ಪಡೆಗಳ ಪ್ರಯತ್ನವನ್ನು ಸೌದಿ ಅರೆಬಿಯಾ ನೇತೃತ್ವದ ಮೈತ್ರಿ ಪಡೆ ಬೆಂಬಲಿಸುತ್ತಿದೆ.ಗುರುವಾರ ನಡೆಸಿದ ಸರಣಿ ದಾಳಿ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಹೌದಿಗಳ ಗುಪ್ತಚರ ಇಲಾಖೆಯ ಅಧಿಕಾರಿಗಳು ವಿಶ್ವಸಂಸ್ಥೆ ಸಿಬ್ಬಂದಿ ಮನೆಗೆ ದಾಳಿ ನಡೆಸಿ ಬಂಧಿಸಿದ್ದಲ್ಲದೆ ಅವರ ಕಂಪ್ಯೂಟರ್, ಮೊಬೈಲ್ ಫೋನ್‍ಗಳನ್ನು ಜಫ್ತಿ ಮಾಡಿದ್ದಾರೆ.

ಬಂಧಿತರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಗಳ ಏಜೆನ್ಸಿ, ವಿಶ್ವಸಂಸ್ಥೆಯ ಆಹಾರ ಯೋಜನೆ ಏಜೆನ್ಸಿಯ ಸಿಬ್ಬಂದಿಗಳಿದ್ದಾರೆ. ಜೊತೆಗೆ, ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯ ಕಚೇರಿಯ ಓರ್ವ ಸಿಬ್ಬಂದಿ, ಓರ್ವ ಸಿಬ್ಬಂದಿಯ ಪತ್ನಿಯೂ ಸೇರಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಇದರೊಂದಿಗೆ ಮಾನವೀಯ ನೆರವು ವಿತರಿಸುವ ಸರಕಾರೇತರ ಸಂಘಟನೆಗಳಾದ ಮಯ್ಯೂನ್ ಮಾನವ ಹಕ್ಕುಗಳ ಸಂಘಟನೆ, ಹುದೈದಾ, ಅಮ್ರಾನ್ ಇತ್ಯಾದಿಗಳ ಸಿಬ್ಬಂದಿಗಳನ್ನೂ ಹೌದಿಗಳು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಹಾಗೆ ಮಾಡದಿದ್ದರೆ ದೇಶವನ್ನು ಜಾಗತಿಕ ವೇದಿಕೆಯಲ್ಲಿ ಪ್ರತ್ಯೇಕವಾಗಿಸಲು ಈ ಉಪಕ್ರಮ ಕಾರಣವಾಗಲಿದೆ ಎಂದು ಆಗ್ರಹಿಸಿ ಕಾರ್ಯಕರ್ತರು, ನ್ಯಾಯವಾದಿಗಳು ಹಾಗೂ ಇತರರು ಆನ್‍ಲೈನ್‍ನಲ್ಲಿ ಮುಕ್ತ ಪತ್ರ ಬರೆಯುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಹೌದಿಗಳ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಸರಕಾರಿ ಉದ್ಯೋಗಿಗಳ ವೇತನ ಪಾವತಿಗೆ ಸೌದಿ ಅರೆಬಿಯಾ ನೀಡಲು ಉದ್ದೇಶಿಸಿರುವ 1.5 ಶತಕೋಟಿ ಡಾಲರ್ ನೆರವು ಸೇರಿದಂತೆ ಹೌದಿಗಳ ಆದಾಯ ಮೂಲವನ್ನು ತಡೆಹಿಡಿಯುವ ಮೂಲಕ ಆರ್ಥಿಕ ಒತ್ತಡವನ್ನು ಇನ್ನಷ್ಟು ಹೆಚ್ಚಿಸಲು ಅಮೆರಿಕ ಯೋಚಿಸುತ್ತಿದೆ. ಯೆಮನ್‍ನ ಯುದ್ಧದಲ್ಲಿ ಹೋರಾಟಗಾರರು, ನಾಗರಿಕರ ಸಹಿತ 1,50,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು ವಿಶ್ವದ ಅತ್ಯಂತ ಭೀಕರ ಮಾನವೀಯ ವಿಪತ್ತಿಗೆ ಕಾರಣವಾಗಿದೆ. ಹೌದಿಗಳು ಬಾಲ ಯೋಧರನ್ನು ನೇಮಿಸಿಕೊಂಡಿದ್ದು ಸಂಘರ್ಷ ವಲಯದಾದ್ಯಂತ ನೆಲಬಾಂಬ್‍ಗಳನ್ನು ಹುಗಿದಿರಿಸಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ 2021 ಮತ್ತು 2023ರಲ್ಲಿ ತಲಾ ಇಬ್ಬರು ವಿಶ್ವಸಂಸ್ಥೆ ಸಿಬ್ಬಂದಿಗಳನ್ನು ಹೌದಿಗಳು ಬಂಧಿಸಿದ್ದು ಈ ನಾಲ್ಕು ಸಿಬ್ಬಂದಿ ಈಗಲೂ ಹೌದಿಗಳ ವಶದಲ್ಲೇ ಇದ್ದಾರೆ. ಈ ಬಂಧನಗಳು `ಕಾನೂನಿನ ನಿಯಮದ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುವ ಅಪಾಯಕಾರಿ ಪ್ರಕ್ರಿಯೆಗಳಾಗಿವೆ' ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ ಖಂಡಿಸಿದೆ.

*ಹೊಸ ಕರೆನ್ಸಿ ಜಾರಿಗೆ ಹೌದಿಗಳ ನಿರ್ಧಾರ

ಯೆಮನ್‍ನ ಅಧಿಕೃತ ಕರೆನ್ಸಿಯಾದ `ರಿಯಾಲ್'ನ ಬದಲು ತಮ್ಮದೇ ಆದ ಹೊಸ ಕರೆನ್ಸಿಯನ್ನು ಜಾರಿಗೊಳಿಸಲು ಹೌದಿಗಳು ನಿರ್ಧರಿಸಿದ್ದು ಇದಕ್ಕೆ ಏಡನ್‍ನಲ್ಲಿರುವ ಯೆಮನ್‍ನ ದೇಶಭ್ರಷ್ಟ ಸರಕಾರ ಹಾಗೂ ಇತರ ದೇಶಗಳಿಂದ ಟೀಕೆ ಎದುರಾಗಿದೆ. ಯೆಮನ್‍ನ ಎಲ್ಲಾ ಬ್ಯಾಂಕ್‍ಗಳೂ ಏಡನ್‍ಗೆ ಸ್ಥಳಾಂತರಗೊಳ್ಳುವಂತೆ ಯೆಮನ್‍ನ ಅಧಿಕೃತ ಸರಕಾರ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News