ಗಾಝಾದಲ್ಲಿ 10 ನಿಮಿಷಕ್ಕೊಂದು ಮಗು ಸಾವು!

Update: 2023-11-11 16:50 GMT

Photo: PTI

ಜಿನೆವಾ : ಗಾಝಾದಲ್ಲಿ ಪ್ರತೀ 10 ನಿಮಿಷಕ್ಕೊಂದು ಮಗು ಸಾಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಕಳವಳ ವ್ಯಕ್ತಪಡಿಸಿದ್ದು ಗಾಝಾದಲ್ಲಿ ಯಾವುದೇ ಪ್ರದೇಶ ಮತ್ತು ಯಾರು ಕೂಡಾ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಘೆಬ್ರಯೇಸಸ್ `ಗಾಝಾದ 36 ಆಸ್ಪತ್ರೆಗಳು ಹಾಗೂ ಮೂರನೇ ಎರಡರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚಲಾಗಿದೆ. ಕಾರ್ಯನಿರ್ವಹಿಸುತ್ತಿರುವ ಕೆಲವೇ ಆಸ್ಪತ್ರೆಗಳೂ ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡಬೇಕಿದೆ. ಅಲ್ಲಿ ಆರೋಗ್ಯ ವ್ಯವಸ್ಥೆ ಅತ್ಯಂತ ದುರ್ಬಲಗೊಂಡಿದೆ. ಆಸ್ಪತ್ರೆಗಳ ಕಾರಿಡಾರ್ಗಳು ಗಾಯಗೊಂಡವರಿಂದ, ರೋಗಪೀಡಿತರಿಂದ ತುಂಬಿದೆ. ಶವಾಗಾರಗಳು ತುಂಬಿ ತುಳುಕುತ್ತಿವೆ. ಅರಿವಳಿಕೆ (ಅನಸ್ತೇಷಿಯಾ) ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಸಾವಿರಾರು ನಿರಾಶ್ರಿತರು ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿದ್ದಾರೆ' ಎಂದರು.

ಇಥಿಯೋಪಿಯಾದಲ್ಲಿ ಯುದ್ಧದ ಸಂದರ್ಭ ತಾನು ಬೆಳೆದು ಬಂದ ಕ್ಷಣಗಳನ್ನು ಸ್ಮರಿಸಿಕೊಂಡ ಘೆಬ್ರಯೇಸಸ್ `ಗಾಳಿಯಲ್ಲಿ ಶಿಳ್ಳೆ ಹೊಡೆಯುವ ಗುಂಡೇಟು, ಶೆಲ್‍ಗಳು, ಹೊಗೆಯ ವಾಸನೆ, ರಾತ್ರಿಯ ಆಗಸದಲ್ಲಿ ಬುಲೆಟ್‍ಗಳ ಹಾರಾಟದ ಸದ್ದು, ಭಯ, ನೋವು .. ಈ ವಿಷಯಗಳು ನನ್ನ ಜೀವನದುದ್ದಕ್ಕೂ ಉಳಿದಿದೆ. ಇಂತಹ ಸಂಕಟಗಳನ್ನು ಗಾಝಾದ ಮಕ್ಕಳು ಅನುಭವಿಸಬಾರದು ' ಎಂದರು.

ಅ.7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಗಾಝಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯ ಜತೆಗೆ ಪದಾತಿ ದಳದ ಆಕ್ರಮಣವನ್ನೂ ತೀವ್ರಗೊಳಿಸಿದೆ. ಅ.7ರಿಂದ ಗಾಝಾ ಮತ್ತು ಪಶ್ಚಿಮದಂಡೆಯ ಆರೋಗ್ಯ ಕೇಂದ್ರಗಳ ಮೇಲೆ 250ಕ್ಕೂ ಅಧಿಕ ದಾಳಿಗಳನ್ನು ನಡೆಸಿರುವ ಮಾಹಿತಿಯಿದೆ. ಇದೇ ವೇಳೆ, ಇಸ್ರೇಲ್‍ನ 25 ಆರೋಗ್ಯಕೇಂದ್ರಗಳ ಮೇಲೆ ದಾಳಿ ನಡೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆಸ್ಪತ್ರೆಗಳ ಅಡಿಯಲ್ಲಿ ನಿರ್ಮಿಸಿರುವ ಸುರಂಗದಲ್ಲಿ ಹಮಾಸ್‍ನ ಶಸ್ತ್ರಾಸ್ತ್ರಗಳ ಸಂಗ್ರಹವಿದೆ ಎಂದು ಇಸ್ರೇಲ್ ಪ್ರತಿಪಾದಿಸುತ್ತಿದೆ.

ದಕ್ಷಿಣ ಗಾಝಾದಲ್ಲಿ ಆಸ್ಪತ್ರೆ ಸ್ಥಾಪನೆಗೆ ಇಸ್ರೇಲ್ ಕಾರ್ಯಪಡೆಯನ್ನು ರಚಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ. ಗಾಝಾದಲ್ಲಿ ಸಂಚಾರಿ ಆಸ್ಪತ್ರೆ ಮತ್ತು ತೇಲುವ ಆಸ್ಪತ್ರೆ(ಹಡಗು ಆಸ್ಪತ್ರೆ)ಗಳ ರಚನೆಗೆ ಸಂಬಂಧಿಸಿ ಯುಎಇ, ಐಸಿಆರ್‍ಸಿ(ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆ) ಮತ್ತು ಯುರೋಪಿಯನ್ ದೇಶಗಳ ಜತೆ ಮಾತುಕತೆ ಪ್ರಗತಿಯಲ್ಲಿದೆ. ಉತ್ತರ ಗಾಝಾದಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ನೆರವನ್ನು ವಿಮಾನದ ಮೂಲಕ ಕೆಳಕ್ಕೆ ಹಾಕಲು(ಏರ್‍ಡ್ರಾಪ್) ಇಸ್ರೇಲ್ ಅವಕಾಶ ಒದಗಿಸಿದೆ. ಗಾಝಾ ನಿವಾಸಿಗಳ ಯೋಗಕ್ಷೇಮದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇತರ ವಿಶ್ವಸಂಸ್ಥೆ ಏಜೆನ್ಸಿಗಳಿಗಿಂತ ಇಸ್ರೇಲ್ ಹೆಚ್ಚಿನ ಕ್ರಮ ಕೈಗೊಂಡಿದೆ ಎಂದವರು ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ಸಹಾಯಕ ರಾಯಭಾರಿ ರಾಬರ್ಟ್ ವುಡ್ `ಗಾಝಾದಲ್ಲಿನ ಆಸ್ಪತ್ರೆಗಳಿಗೆ ಇಂಧನ ಒದಗಿಸಲು ಅಮೆರಿಕ ಕಾರ್ಯನಿರ್ವಹಿಸುತ್ತಿದೆ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ನಾಗರಿಕ ಮತ್ತು ಮಾನವೀಯ ಸೌಲಭ್ಯಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು' ಎಂದು ಒತ್ತಿಹೇಳಿದರು. ಹಮಾಸ್ ನಾಗರಿಕರನ್ನು ಮಾನವ ಗುರಾಣಿಗಳಂತೆ ಬಳಸುತ್ತಿದೆ. ಈ ಹೇಡಿತನದ ತಂತ್ರಗಳು ಹಮಾಸ್ ವಿರುದ್ಧದ ಹೋರಾಟದಲ್ಲಿ ನಾಗರಿಕರು ಮತ್ತು ಭಯೋತ್ಪಾದಕರ ನಡುವೆ ವ್ಯತ್ಯಾಸಗಳನ್ನು ಗುರುತಿಸುವ ಇಸ್ರೇಲ್‍ನ ಜವಾಬ್ದಾರಿಯನ್ನು ಕಡಿಮೆಗೊಳಿಸುವುದಿಲ್ಲ ಎಂದವರು ಹೇಳಿದರು. ಇಸ್ರೇಲ್ ಮತ್ತು ಗಾಝಾದಲ್ಲಿ ಮೃತಪಟ್ಟ ನಾಗರಿಕರು ಹಾಗೂ ವಿಶ್ವಸಂಸ್ಥೆಯ ಫೆಲೆಸ್ತೀನಿಯನ್ ನಿರಾಶ್ರಿತರ ಏಜೆನ್ಸಿಯ ಸದಸ್ಯರಿಗೆ ಗೌರವ ಸೂಚಿಸಲು ಭದ್ರತಾ ಮಂಡಳಿ ಒಂದು ನಿಮಿಷದ ಮೌನ ಆಚರಿಸಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News