ಹೆಣ್ಣೆಂದು 6 ದಿನಗಳ ಶಿಶುವನ್ನು ಹತ್ಯೆಗೈದ ತಾಯಿ!

Update: 2024-08-31 15:43 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಇಪ್ಪತ್ತೆಂಟು ವರ್ಷದ ಮಹಿಳೆಯೋರ್ವರು ತನ್ನ 6 ದಿನದ ಹೆಣ್ಣು ಶಿಶುವಿನ ಕತ್ತು ಹಿಸುಕಿ ಹತ್ಯೆಗೈದು, ಮೃತದೇಹವನ್ನು ಚೀಲವೊಂದರಲ್ಲಿ ಕಟ್ಟಿ, ಮನೆಯ ಸಮೀಪ ಇರುವ ಇನ್ನೊಂದು ಮನೆಯ ಟೆರೇಸ್ ಮೇಲೆ ಎಸೆದಿರುವ ಆಘಾತಕಾರಿ ಘಟನೆ ನಗರದ ದ್ವಾರಕಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಶಿವಾನಿ ಎಂಬವರನ್ನು ಬಂಧಿಸಲಾಗಿದೆ. ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಆಕೆ, ತಾನು ನಾಲ್ಕನೇ ಬಾರಿ ಕೂಡ ಹೆಣ್ಣು ಶಿಶುವಿಗೆ ಜನ್ಮ ನೀಡಿರುವುದರಿಂದ ಸಾಮಾಜಿಕ ಕಳಂಕಕ್ಕೆ ಒಳಗಾದೆ. ಆದುದರಿಂದ ಶಿಶುವನ್ನು ಹತ್ಯೆಗೈದೆ ಎಂದು ತಿಳಿಸಿದ್ದಾರೆ.

ಶಿವಾನಿಯ ನಾಲ್ಕು ಮಕ್ಕಳಲ್ಲಿ ಎರಡು ಮಕ್ಕಳು ಕಾಯಿಲೆಗಳಿಂದ ಈಗಾಗಲೇ ಮೃತಪಟ್ಟಿವೆ. ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡ ಡಿಸಿಪಿ (ಪಶ್ಚಿಮ) ವಿಚಿತ್ರ ವೀರ್, 6 ದಿನಗಳ ಶಿಶು ಕಾಣೆಯಾಗಿರುವ ಕುರಿತು ಖ್ಯಾಲಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮುಂಜಾನೆ 5.30ಕ್ಕೆ ಪಿಸಿಆರ್ ಕರೆ ಸ್ವೀಕರಿಸಲಾಗಿತ್ತು. ಕೂಡಲೇ ಖ್ಯಾಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

‘‘ತಾನು ಹಿಂದಿನ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾದೆ. ಅಲ್ಲಿಂದ ತವರು ಮನೆಗೆ ಬಂದೆ. ಮುಂಜಾನೆ ಸುಮಾರು 2.30ರ ಹೊತ್ತಿಗೆ ಮಗುವಿಗೆ ಹಾಲುಣಿಸಿ ತನ್ನ ಪಕ್ಕ ಮಲಗಿಸಿಕೊಂಡಿದ್ದೆ. ತಾನು ಮುಂಜಾನೆ 4.30ಕ್ಕೆ ಎದ್ದಾಗ ಮಗು ನಾಪತ್ತೆಯಾಗಿತ್ತು ಎಂದು ಶಿವಾನಿ ಆರಂಭಿಕ ತನಿಖೆಯ ಸಂದರ್ಭದಲ್ಲಿ ಹೇಳಿದ್ದಳು’’ ಎಂದು ಡಿಸಿಪಿ ತಿಳಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಕೂಡಲೇ ಕಾರ್ಯಾಚರಣೆಗೆ ಇಳಿದರು ಹಾಗೂ ತಂಡವೊಂದನ್ನು ರಚಿಸಿದರು. ತಂಡ ಆ ಪ್ರದೇಶದಲ್ಲಿರುವ ಸಿಸಿಟಿವಿ ದಶ್ಯಾವಳಿಗಳನ್ನು ಪರಿಶೀಲಿಸಿತು. ಈ ಸಂದರ್ಭ ಸಮೀಪದ ಮನೆಯ ಟೆರೇಸ್‌ನಲ್ಲಿ ಚೀಲವೊಂದು ಕಂಡು ಬಂತು. ಅದನ್ನು ತೆರೆದಾಗ, ಅದರಲ್ಲಿ ಹೆಣ್ಣು ಮಗು ಪತ್ತೆಯಾಯಿತು. ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಗು ಅದಾಗಲೇ ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ.

ಶಿವಾನಿಯ ವಿಚಿತ್ರ ನಡವಳಿಕೆಯ ಬಗ್ಗೆ ಪೊಲೀಸರು ಈಗಾಗಲೇ ಸಂಶಯಿಸಿದ್ದರು. ಮಗುವಿನ ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ಶಿವಾನಿ ಅವರನ್ನು ಬಂಧಿಸಿದರು. ಕೂಲಂಕಷ ವಿಚಾರಣೆ ನಡೆಸಿದ ಸಂದರ್ಭ ಶಿವಾನಿ ಮಗುವನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News