ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ರೈಲ್ವೆ ಸಿಬ್ಬಂದಿಯ ಥಳಿಸಿ ಹತ್ಯೆ

Update: 2024-09-14 05:32 GMT

ಲಕ್ನೋ: ಹನ್ನೊಂದು ವರ್ಷ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 34 ವರ್ಷ ವಯಸ್ಸಿನ ರೈಲ್ವೆ ಸಿಬ್ಬಂದಿಯೊಬ್ಬನನ್ನು ಸಹ ಪ್ರಯಾಣಿಕರು ಥಳಿಸಿ ಹತ್ಯೆ ಮಾಡಿದ ಘಟನೆ  ಹಮ್ ಸಫರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ.

ಲಕ್ನೋ ಮತ್ತು ಕಾನ್ಪುರ ನಡುವೆ ಬುಧವಾರ ನಸುಕಿನಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಬಿಹಾರದ ಮುಝಫರ್ ಪುರದ ಡಿ ದರ್ಜೆ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ.

ಕಾಯ್ದಿರಿಸದ ಟಿಕೆಟ್ ಹೊಂದಿದ್ದ ಪ್ರಶಾಂತ್, ಬರೂನಿ-ದೆಹಲಿ ಹಮ್ ಸಫರ್ (02563) ಕ್ಲೋನ್ ಎಕ್ಸ್‌ಪ್ರೆಸ್‌ ರೈಲಿನ ಎಂ1 ಕೋಚ್ ಏರಿದ್ದ. ಆದರೆ ಟಿಕೆಟ್ ಪರೀಕ್ಷಕರು ಈತನಿಗೆ ದಂಡ ವಿಧಿಸಿ ಬದಿಯ ಕೆಳಬರ್ತ್ ನೀಡಿದ್ದರು.

ಬುಧವಾರ ನಸುಕಿನ 2.30ರ ವೇಳೆಗೆ ಪ್ರಶಾಂತ್ ನನ್ನನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿರುವುದಾಗಿ ಬಾಲಕಿ ತಾಯಿಗೆ ದೂರು ನೀಡಿದಳು. ಬಾಲಕಿಯ ತಾಯಿ ಪ್ರಶಾಂತ್ ಜತೆಗೆ ಜಗಳ ಆರಂಭಿಸಿದಾಗ, ಬಾಲಕಿಯ ತಂದೆ ಸೇರಿದಂತೆ ಇತರ ಪ್ರಯಾಣಿಕರು ಆತನನ್ನು ಥಳಿಸಿದರು. ಕಾನ್ಪುರ ತಲುಪಿದಾಗ ಪ್ರಶಾಂತ್ ನನ್ನು ಜಿಆರ್ ಪಿ ಠಾಣೆಗೆ ಕರೆತರಲಾಯಿತು. ಸಂತ್ರಸ್ತ ಬಾಲಕಿಯ ಪೋಷಕರು ಪ್ರಶಾಂತ್ ವಿರುದ್ಧ ದೂರು ದಾಖಲಿಸಿದರು ಎಂದು ಪ್ರಯಾಗ್ರಾಜ್ ಜಿಆರ್ ಪಿ ಡಿವಿಷನ್ ಎಸ್ಪಿ ಅಭಿಷೇಕ್ ಯಾದವ್ ಹೇಳಿದ್ದಾರೆ.

ಪ್ರಶಾಂತ್ ಆರೋಗ್ಯ ಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News