ಉತ್ತರ ಪ್ರದೇಶ: ಅಲಿಗಡ ಅನ್ನು ಹರಿಘರ್‌ ಎಂದು ಮರುನಾಮಕರಣಗೊಳಿಸುವ ಪ್ರಸ್ತಾವನೆ ಅನುಮೋದಿಸಿದ ಸ್ಥಳೀಯಾಡಳಿತ

Update: 2023-11-07 11:05 GMT

Photo: NDTV

ಹೊಸದಿಲ್ಲಿ: ಅಲಹಾಬಾದ್‌ ಮತ್ತು ಫೈಜಾಬಾದ್‌ ನಂತರ ಉತ್ತರ ಪ್ರದೇಶದಲ್ಲಿ ಅಲಿಗಡ ನಗರದ ಹೆಸರು ಬದಲಾವಣೆಗೆ ಆಡಳಿತ ಮುಂದಾಗಿದೆ. ಅಲಿಗಡ ಹೆಸರನ್ನು ಹರಿಘರ್‌ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಅಲಿಗಡ ಮುನಿಸಿಪಲ್‌ ಕಾರ್ಪೊರೇಷನ್‌ ಸರ್ವಾನುಮತದಿಂದ ಅಂಗೀಕರಿಸಿದೆ. ಮೇಯರ್‌ ಪ್ರಶಾಂತ್‌ ಸಿಂಘಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರ ಅನುಮೋದನೆ ನೀಡಿದರೆ ಹೆಸರು ಬದಲಾವಣೆಗೊಳ್ಳಲಿರುವ ಮೂರನೇ ನಗರ ಇದಾಗಲಿದೆ. ಜನವರಿ 2019ರಲ್ಲಿ ಅಲಹಾಬಾದ್‌ ಹೆಸರನ್ನು ಪ್ರಯಾಗರಾಜ್‌ ಎಂದು ಬದಲಿಸಲಾಗಿತ್ತು.

ಈ ಹಿಂದೆ 2021ರಲ್ಲಿ ಆಗಿನ ಜಿಲ್ಲಾ ಪಂಚಾಯತ್‌ ಕೂಡ ಆಲಿಘರ್‌ ಹೆಸರನ್ನು ಹರಿಘರ್‌ ಎಂದು ಬದಲಾಯಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಿತ್ತು.

2017ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಆದಿತ್ಯನಾಥ್‌ ಸರ್ಕಾರ ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ವೇ ಸಹಿತ ಹಲವು ಯೋಜನೆಗಳ ಹೆಸರು ಬದಲಾಯಿಸಿದೆ. ಹಿಂದಿನ ಸಮಾಜವಾದಿ ಪಕ್ಷ ಸರ್ಕಾರದ ಅವಧಿಯಲ್ಲಿದ್ದ ಸಮಾಜವಾದಿ ಅಂಬುಲೆನ್ಸ್‌ ಸ್ವಾಸ್ಥ್ಯ ಸೇವಾ ಅಂಬುಲೆನ್ಸ್‌ ಸೇವೆಯ ಹೆಸರಿನಲ್ಲಿನ ಸಮಾಜವಾದಿ ಪದವನ್ನು ಈಗಿನ ಸರ್ಕಾರ ಕೈಬಿಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News