ಅಜಿತ್ ಪವಾರ್ ಅಸಮರ್ಥ: ತಮ್ಮನ ವಿರುದ್ಧ ಚಾಟಿ ಬೀಸಿದ ಅಣ್ಣ!

Update: 2024-03-19 04:02 GMT

    Photo: screenshot/ twitter.com/ss_suryawanshi

ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ “ನಾಲಾಯಕ್ ಮನೂಸ್ (ಅಸಮರ್ಥ ವ್ಯಕ್ತಿ)” ಎಂದು ಅಣ್ಣ ಶ್ರೀನಿವಾಸ್ ಹೇಳಿದ್ದಾರೆ. ಬಾರಾಮತಿಯ ಕಾತೇವಾಡಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮನ ವಿರುದ್ಧ ವಾಗ್ದಾಳಿ ನಡೆಸಿದರು.

ಶರದ್ ಪವಾರ್ ಅವರ ಅಣ್ಣ ಅನಂತರಾವ್ ಅವರ ಮಕ್ಕಳಾದ ಅಜಿತ್ ಹಾಗೂ ಶ್ರೀನಿವಾಸ್, ಇತ್ತೀಚಿನ ವರೆಗೂ ಅತ್ಯಂತ ಆತ್ಮೀಯರಾಗಿದ್ದರು. 2019ರ ನವೆಂಬರ್ ನಲ್ಲಿ ಅಜಿತ್ ತಮ್ಮ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದು, ಎನ್ ಸಿಪಿ-ಬಿಜೆಪಿ ಸರ್ಕಾರ ರಚಿಸಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ಶ್ರೀನಿವಾಸ್ ಅವರ ಮುಂಬೈ ಮನೆಯಲ್ಲೇ ಅಜಿತ್ ಇದ್ದರು.

ಇದೀಗ ಶ್ರೀನಿವಾಸ್, ಚಿಕ್ಕಪ್ಪನ ಪರ ನಿಂತಿದ್ದು, ಇವರ ಮಗ ಹಾಲಿ ಸಂಸದೆ ಹಾಗೂ ಪವಾರ್ ಪುತ್ರಿ ಸುಪ್ರಿಯಾ ಸುಳೆ ಪರ ಪ್ರಚಾರ ಆರಂಭಿಸಿದ್ದಾರೆ.

ಅಜಿತ್ ಅವರನ್ನು ನಿಷ್ಠೆ ಇಲ್ಲದ ವ್ಯಕ್ತಿ ಎಂದು ಹೇಳಿದ ಶ್ರೀನಿವಾಸ್, 25 ವರ್ಷ ಸಚಿವರಾಗಿ, ನಾಲ್ಕು ಬಾರಿ ಉಪಮುಖ್ಯಮಂತ್ರಿಯಾಗಿ ಮಾಡಿದ 83 ವರ್ಷದ ವ್ಯಕ್ತಿ (ಶರದ್ ಪವಾರ್)ಯನ್ನು ಬಿಟ್ಟು ಅಲ್ಪಾವಧಿ ಲಾಭಕ್ಕಾಗಿ ನಿಷ್ಠೆ ಬದಲಿಸಿದ ಇಂಥ ವ್ಯಕ್ತಿಗಿಂತ ಅನರ್ಹರು ಯಾರೂ ಸಿಗಲಾರರು ಎಂದು ಅಭಿಪ್ರಾಯಪಟ್ಟಿದ್ದಾರೆ.

"ದಾದಾ (ಅಜಿತ್) ವಿರುದ್ಧದ ಹೇಳಿಕೆ ಹಲವರಿಗೆ ಅಚ್ಚರಿ ಮೂಡಿಸಬಹುದು. ಒಳ್ಳೆಯ ಹಾಗೂ ಕೆಟ್ಟ ಸಂದರ್ಭಗಳಲ್ಲೂ ನಾನು ಸದಾ ಆತನ ಜತೆಗಿದ್ದೆ. ಆತ ಹಾರು, ಧುಮುಕು ಎಂದು ಹೇಳಿದರೂ ಯೋಚಿಸದೇ ಹಾಗೆ ಮಾಡುತ್ತಿದ್ದೆ. ಆದರೆ ಸಂಬಂಧಿಕರಿಗೆ ಕೂಡಾ ಔಷಧಿಗಳಂತೆ ನಿಗದಿತ ಅವಧಿ ಇರುತ್ತದೆ. ಸಾಹೇಬ್ (ಶರದ್) ಅವರಿಗೆ ನಾವು ಎಷ್ಟು ಋಣಿಗಳಾಗಿರಬೇಕು ಎನ್ನುವುದು ಗ್ರಾಮಸ್ಥರಾದ ನಿಮಗೆ ಗೊತ್ತಿದೆ. 83 ವರ್ಷದ ಅವರನ್ನು ಬಿಟ್ಟುಹೋಗಿರುವುದು ಸರಿಯಲ್ಲ. ಇದು ದಾದಾ ಅವರ ಕಾಲ ಅಲ್ಲ. ಸಾಹೇಬ್ ಅವರ ಕಾಲ ಎಂದು ನನ್ನ ಸ್ನೇಹಿತರು ಹೇಳುತ್ತಿದ್ದಾರೆ. ಈ ಭಾವನೆಯಿಂದ ನನಗೆ ತೀವ್ರ ನೋವಾಗಿದೆ. ಹಿರಿಯರ ಚಿಂತನೆಗೆ ಗೌರವ ನೀಡದೇ, ಮುಂದಿನ 10 ವರ್ಷ ನನಗೆ ಲಾಭವಾಗಬಹುದು ಎಂದು ಹೊಸಬರತ್ತ ಹೋಗಿರುವುದಕ್ಕಿಂತ ಕೃತಘ್ನತೆ ಇನ್ನೊಂದಿಲ್ಲ" ಎಂದು ಶ್ರೀನಿವಾಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News