ಉತ್ತರಪ್ರದೇಶ ಸಿಎಂ ನಿವಾಸದಡಿಯಲ್ಲಿ ಶಿವಲಿಂಗವಿದೆ: ಅಖಿಲೇಶ್ ಯಾದವ್
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲಕ್ನೋದ ಅಧಿಕೃತ ನಿವಾಸದ ಅಡಿಯಲ್ಲಿ ಶಿವಲಿಂಗವಿದ್ದು, ಅಲ್ಲಿ ಉತ್ಖನನ ನಡೆಯಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
ಸಂಭಲ್ ಸೇರಿದಂತೆ ಹಲವೆಡೆ ಸಮೀಕ್ಷೆ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಲಕ್ನೋದಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಅಡಿಯಲ್ಲಿ ಶಿವಲಿಂಗವಿದೆ. ಅದು ನಮಗೆ ತಿಳಿದಿದೆ. ಅಲ್ಲಿ ಉತ್ಖನನ ನಡೆಯಬೇಕು ಎಂದು ಹೇಳಿದ್ದಾರೆ.
ಬಿಜೆಪಿ ನಿರುದ್ಯೋಗ, ಕೃಷಿ ಬಿಕ್ಕಟ್ಟು ಸೇರಿದಂತೆ ಪ್ರಮುಖ ಸಮಸ್ಯೆಗಳಿಂದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸಲು ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಇಂತಹ ಸಮೀಕ್ಷೆಗಳನ್ನು ಮಾಡುತ್ತಿದೆ. ಉತ್ತರಪ್ರದೇಶದ ಜನರು ಬಿಜೆಪಿ ಸರ್ಕಾರವನ್ನು ಉರುಳಿಸಲು ಬಯಸಿದ್ದಾರೆ ಮತ್ತು ಚುನಾವಣೆಗಾಗಿ ಕಾಯುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ, ಶಿಕ್ಷಣ, ರೈತರ ಸಮಸ್ಯೆ ಮತ್ತು ಮಹಿಳಾ ಸುರಕ್ಷತೆ ಸೇರಿ ಎಲ್ಲಾ ವಿಷಯಗಳಲ್ಲಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಯುಪಿಯಲ್ಲಿ ಮುಂಬರುವ ಸಮಯ ಬದಲಾವಣೆಯ ಸಮಯವಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.