ಬಿಹಾರದಲ್ಲಿ ಒಂದೇ ವಾರದಲ್ಲಿ ಮತ್ತೊಂದು ಸೇತುವೆ ಕುಸಿತ

Update: 2024-06-22 09:40 GMT

PC : NDTV 

ಪಾಟ್ನಾ: ಇಂದು ಬೆಳಗ್ಗೆ ಬಿಹಾರದ ಸಿವಾನ್ ನಲ್ಲಿ ಸೇತುವೆಯೊಂದು ಹಠಾತ್ ಕುಸಿತಗೊಂಡಿದ್ದು, ಈ ಪ್ರದೇಶದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಗಂಡಕ್ ನಾಲೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಈ ಸೇತುವೆಯು ಕುಸಿದಿದ್ದರಿಂದ, ನೆರೆಯ ದರ್ಭಾಂಗ ಜಿಲ್ಲೆಯ ರಾಮಗಢ ಗ್ರಾಮದವರೆಗೂ ಕುಸಿತದ ಭಾರಿ ಸದ್ದು ಕೇಳಿ ಬಂದಿತು ಎಂದು ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಸೇತುವೆ ಕುಸಿತದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕಟ್ಟಡ ನಿರ್ಮಾಣದಲ್ಲಿನ ದೋಷದ ಗಂಭೀರತೆಯನ್ನು ಎತ್ತಿ ತೋರಿಸಿದೆ. ಮಹಾರಾಜ್ ಗಂಜ್ ಜಿಲ್ಲೆಯ ಪಟೇಧಿ ಬಝಾರ್ ನಿಂದ ದರ್ಭಾಂಗ ಜಿಲ್ಲೆಯ ರಾಮಗಢ ಪಂಚಾಯತಿಯನ್ನು ಸಂಪರ್ಕಿಸಲು ನಿರ್ಮಿಸಲಾಗಿದ್ದ ಈ ಸೇತುವೆಯ, ಪ್ರತಿ ನಿತ್ಯ ಸಹಸ್ರಾರು ಸವಾರರಿಗೆ ಪ್ರಮುಖ ಸಂಪರ್ಕ ಸೇತುವೆಯಾಗಿತ್ತು.

ಈ ಕುಸಿತಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಈ ಸೇತುವೆಯು ತೀರಾ ಹಳತಾಗಿತ್ತು. ಈ ಸೇತುವೆಯನ್ನು 40 ವರ್ಷಗಳ ಹಿಂದೆ ನಾಲೆ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿತ್ತು ಹಾಗೂ ಸೂಕ್ತ ನಿರ್ವಹಣೆ ಮಾಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ನಾಲೆಯ ನಿರ್ಮಾಣದ ಸಂದರ್ಭದಲ್ಲಿ ಸೇತುವೆಯ ಸ್ತಂಭಗಳನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ, ಸೇತುವೆಯ ಸ್ತಂಭಗಳ ಸುತ್ತ ತುಕ್ಕು ಹಿಡಿದಿತ್ತು. ಹೀಗಾಗಿ ಒಂದು ಸ್ತಂಭವು ದುರ್ಬಲಗೊಂಡು ಕುಸಿದಿರುವುದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಈ ಸೇತುವೆಯ ಕುಸಿತದಿಂದ ಗಂಡಕ್ ನಾಲೆಯ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಇದಕ್ಕೂ ಮುನ್ನ, ಜೂನ್ 19ರಂದು ಬಾಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ಸೇತುವೆ ಕೂಡಾ ಹಠಾತ್ ಕುಸಿದು ಬಿದ್ದಿತ್ತು. ಈ ಸೇತುವೆಯ ನಿರ್ಮಾಣಕ್ಕೆ ಸುಮಾರು 12 ಕೋಟಿ ರೂಪಾಯಿಯನ್ನು ವ್ಯಯಿಸಲಾಗಿತ್ತು. ಆದರೆ, ಉದ್ಘಾಟನೆಗೆ ಒಂದು ದಿನ ಬಾಕಿ ಇರುವಾಗಲೇ ಈ ಸೇತುವೆ ಕುಸಿದು ಬಿದ್ದಿತ್ತು. ಇದರ ಬೆನ್ನಿಗೇ ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News