ಮುಕೇಶ್ ಅಂಬಾನಿಗೆ ಮತ್ತೊಂದು ಜೀವ ಬೆದರಿಕೆ: 200 ಕೋಟಿಗೆ ಬೇಡಿಕೆ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ ಇ-ಮೇಲ್ ಮೂಲಕ ಕೊಲೆ ಬೆದರಿಕೆ ಸಂದೇಶ ಬಂದಿದ್ದು, 200 ಕೋಟಿ ರೂಪಾಯಿ ಪಾವತಿಸದೇ ಇದ್ದಲ್ಲಿ ಗುಂಡಿಟ್ಟು ಸಾಯಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಾರಿ ಅಂಬಾನಿಗೆಯವರಿಗೆ ಬೆದರಿಕೆ ಸಂದೇಶ ಇ-ಮೇಲ್ ಮೂಲಕ ಬಂದಿದ್ದು, ಹಿಂದಿನ ಇ-ಮೇಲ್ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಈ ಬಾರಿ ಬೇಡಿಕೆ 20 ಕೋಟಿಯಿಂದ 200 ಕೋಟಿಗೆ ಹೆಚ್ಚಿದೆ ಎಂದು ಪೊಲೀಸರು ವಿವರಿಸಿದ್ದಾರೆ.
"ಅದೇ ಖಾತೆಯಿಂದ ಮತ್ತೊಂದು ಇ-ಮೇಲ್ ಸಂದೇಶ ಬಂದಿದೆ. ಅದು ಹೀಗಿದೆ: ನಮ್ಮ ಇ-ಮೇಲ್ ಗೆ ನೀವು ಪ್ರತಿಕ್ರಿಯೆ ನೀಡಿಲ್ಲ. ಇದೀಗ ಬೇಡಿಕೆ ಮೊತ್ತ 200 ಕೋಟಿ ರೂಪಾಯಿ ಆಗಿದ್ದು, ಇದನ್ನು ನೀಡದಿದ್ದರೆ ಡೆತ್ ವಾರೆಂಟ್ ನೀಡಲಾಗುತ್ತದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಮುಕೇಶ್ ಅಂಬಾನಿಗೆ ಬಂದ ಇ-ಮೇಲ್ ಸಂದೇಶದಲ್ಲಿ 20 ಕೋಟಿ ರೂಪಾಯಿ ಬೇಡಿಕೆ ಮುಂದಿಡಲಾಗಿತ್ತು. ಈ ಸಂದೇಶದಲ್ಲಿ "ನೀವು ನಮಗೆ 20 ಕೋಟಿ ರೂಪಾಯಿ ನೀಡದಿದ್ದರೆ, ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ. ಭಾರತದ ಅತ್ಯುತ್ತಮ ಶೂಟರ್ ಗಳು ನಮ್ಮ ಬಳಿ ಇದ್ದಾರೆ" ಎಂದು ಹೇಳಲಾಗಿತ್ತು.
ಮುಕೇಶ್ ಅಂಬಾನಿಯವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ದಕ್ಷಿಣ ಮುಂಬೈನ ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 387 ಮತ್ತು 506(2) ಅನ್ವಯ ಪ್ರಕರಣ ದಾಖಲಿಸಲಾಗಿದೆ.