ಅಸ್ಸಾಂ ಪ್ರವಾಹ ಪರಿಸ್ಥಿತಿ ಸುಧಾರಣೆ: ಸಾವಿನ ಸಂಖ್ಯೆ 14ಕ್ಕೆ ಏರಿಕೆ
ಗುವಾಹತಿ: ಎರಡು ದಿನಗಳಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಹ ಪರಿಸ್ಥಿತಿಯಲ್ಲಿ ಅಲ್ಪ ಸುಧಾರಣೆ ಕಂಡುಬಂದಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹದಿಂದ 535246 ಮಂದಿ ಹಾನಿಗೀಡಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ಪ್ರಕಟಿಸಿದೆ.
ಭಾನುವಾರ ಮತ್ತೆ ಮೂರು ಮಳೆ ಸಂಬಂಧಿ ಸಾವುಗಳು ವರದಿಯಾಗಿದ್ದು, ಮೇ 28 ರಿಂದೀಚೆಗೆ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ. ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹ ಬಾಧಿತರಾಗಿರುವವರ ಸಂಖ್ಯೆ ಶನಿವಾರ 6 ಲಕ್ಷಕ್ಕೂ ಅಧಿಕ ಇತ್ತು. ಭಾನುವಾರ ಸ್ವಲ್ಪ ಕಡಿಮೆಯಾಗಿದೆ. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಅಪಾಯಕ್ಕಿಂತ ಕೆಳಮಟ್ಟದಲ್ಲಿ ಹರಿಯುತ್ತಿವೆ. ಎಲ್ಲ ಅಣೆಕಟ್ಟುಗಳ ಪ್ರಮುಖ ಗೇಟುಗಳನ್ನು ತೆರೆಯಲಾಗಿದ್ದು, ನಿಂತ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹೈಲಕಂಡಿ, ಕರೀಂಗಂಜ್, ಹೊಲೈ, ಧೇಮಜಿ, ಕರ್ಮುಪ್, ದಿಬ್ರೂಗಢ, ನಾಗೋನ್, ಮೊರಿಗಾಂವ್, ಕಚಾರ್, ದಕ್ಷಿಣ ಸಾಲ್ಮರ, ಕಬ್ರಿ ಅಂಗ್ಲಾಂಗ್ ಪಶ್ಚಿಮ, ಗೋಲಘಾಟ್ ಮತ್ತು ಡಿಮಾ ಹಸ್ಸಾವೊ ಜಿಲ್ಲೆಗಳು ತೀವ್ರ ಹಾನಿಗೀಡಾಗಿವೆ. ನಾಗಾಂವ್ ಜಿಲ್ಲೆಯೊಂದರಲ್ಲೇ ಮೂರು ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಕಚಾರ್ ನಲ್ಲೂ ಒಂದು ಲಕ್ಷಕ್ಕೂ ಅಧಿಕ ಮಂದಿ ಹಾನಿಗೀಡಾಗಿದ್ದು, ಕಚಾರ್ ನಲ್ಲಿ ಇಬ್ಬರು ಹಾಗೂ ನಾಗಾಂವ್ ನಲ್ಲಿ ಒಬ್ಬರು ಭಾನುವಾರ ಮೃತಪಟ್ಟಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.