ಮಗಳ ಅಪಹರಣ ದೂರು ವಾಪಸ್ ಪಡೆಯಲು ಮಹಿಳೆಗೆ ಹಲ್ಲೆ: ಪೊಲೀಸ್ ಅಧಿಕಾರಿ ಅಮಾನತು
ಲಕ್ನೊ: ಮಗಳನ್ನು ಅಪಹರಿಸಿ ಕಿರುಕುಳ ನೀಡಲಾಗಿದೆ ಎಂಬುದಾಗಿ ನೀಡಲಾಗಿರುವ ದೂರನ್ನು ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರಲು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಉತ್ತರಪ್ರದೇಶದ ರಾಮ್ಪುರ ಪಟ್ಟಣದ ಪೊಲೀಸ್ ಅಧಿಕಾರಿಯೊಬ್ಬನನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ಅಧಿಕಾರಿಯ ವರ್ತನೆಯ ವಿರುದ್ಧ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಮಿಲಕ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ ಬಳಿಕ ಆತನನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಹೊರ ಠಾಣೆಯೊಂದರ ಉಸ್ತುವಾರಿಯನ್ನು ಜಿಲ್ಲಾಡಳಿತವು ಅಮಾನತು ಮಾಡಿದೆ. ಅದೇ ವೇಳೆ, ಓರ್ವ ಸರ್ಕಲ್ ಇನ್ಸ್ಪೆಕ್ಟರ್, ಮಿಲಕ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳನ್ನು ವರ್ಗಾಯಿಸಲಾಗಿದೆ.
ಪೊಲೀಸರು ಮಂಗಳವಾರ ನಮ್ಮ ಮನೆಯಲ್ಲಿ ನನ್ನ ಮತ್ತು ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು 12 ವರ್ಷದ ಬಾಲಕಿಯ ತಾಯಿ ಆರೋಪಿಸಿದ್ದಾರೆ. ದೂರನ್ನು ವಾಪಸ್ ಪಡೆಯಲು ಪೊಲೀಸರು ನನ್ನ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ಹೇಳಿದರು.
ಇಬ್ಬರು ಹುಡುಗರು ನನ್ನ ಮಗಳನ್ನು ಅವರ ಬೈಕ್ ನಲ್ಲಿ ಬಲವಂತವಾಗಿ ಕೂರಿಸಿ ಕರೆದುಕೊಂಡು ಹೋಗಿದ್ದಾರೆ ಎಂಬುದಾಗಿ ಮಹಿಳೆಯು ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಲಾಗಿದೆ.