ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ | ಮಹಾರಾಷ್ಟ್ರ ಬಂದ್ ಇಲ್ಲ; ವಿರೋಧ ಪಕ್ಷದ ನಾಯಕರಿಂದ ಬೀದಿಗಿಳಿದು ಪ್ರತಿಭಟನೆ

Update: 2024-08-24 11:20 GMT

PC : ANI 

ಮುಂಬೈ: ಬದ್ಲಾಪುರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು, ರಾಜ್ಯದಾದ್ಯಂತ ಶನಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಬದ್ಲಾಪುರ್ ಘಟನೆಯನ್ನು ವಿರೋಧಿಸಿ ಆಗಸ್ಟ್ 24 ರಂದು ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರತಿಪಕ್ಷಗಳು ಕರೆ ನೀಡಿದ್ದ ಬಂದ್‌ ಗೆ ನಿಷೇಧ ಹೇರಿ, ಬಾಂಬೆ ಹೈಕೋರ್ಟ್ ಶುಕ್ರವಾರ ಆದೇಶ ನೀಡಿತ್ತು.

ಅದರಂತೆ, ವಿಪಕ್ಷಗಳು ಬಂದ್ ನಿಂದ ದೂರ ಉಳಿದು, ಪ್ರತಿಭಟನೆಯಲ್ಲಿ ಭಾಗವಹಿಸಿದವು.ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ-ಎಸ್‌ಪಿ), ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಸೇರಿದಂತೆ ಮಹಾ ವಿಕಾಸ್ ಅಘಾಡಿಯ ನಾಯಕರು ಮತ್ತು ಬೆಂಬಲಿಗರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತಿಭಟನಾಕಾರರು ತಮ್ಮ ಹಣೆ ಮತ್ತು ತೋಳುಗಳ ಮೇಲೆ ಕಪ್ಪು ಪಟ್ಟಿಗಳನ್ನು ಧರಿಸಿದ್ದರು.

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶಿವಸೇನಾ ಭವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಮಹಾರಾಷ್ಟ್ರ ಸರ್ಕಾರ ಅವರೊಂದಿಗೆ ನಿಂತಿರುವುದು ವಿಷಾದನೀಯ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಹಾಯುತಿ ಸರ್ಕಾರವನ್ನು ಕಿತ್ತೊಗೆಯುವುದು ಅನಿವಾರ್ಯವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.

ಠಾಕ್ರೆ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ 'ಬಹಿನ್ ಸುರಕ್ಷಿತ್ ತರ್ ಘರ್ ಸುರಕ್ಷಿತ್' (ಸಹೋದರಿಯರು ಸುರಕ್ಷಿತವಾಗಿದ್ದರೆ ಮನೆ ಸುರಕ್ಷಿತ) ಎಂಬ ಘೋಷಣೆಯೊಂದಿಗೆ ಸಹಿ ಅಭಿಯಾನವನ್ನು ನಡೆಸಲು ಹೇಳಿದರು. ಅದನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎನ್ನಲಾಗಿದೆ.

"ನ್ಯಾಯಾಲಯವು ನಮ್ಮ ಬಂದ್ ಅನ್ನು ನಿಲ್ಲಿಸಿತು, ಆದರೆ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಠಾಕ್ರೆ ಹೇಳಿದರು.

ಪುಣೆಯಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಮಾತನಾಡಿದ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಪ್ರಮುಖ ನಾಯಕ ಶರದ್ ಪವಾರ್, ಘಟನೆಯು ಮಹಾರಾಷ್ಟ್ರದ ಪ್ರತಿಷ್ಠೆಗೆ ಕಳಂಕ ತಂದಿದೆ. ಸರಕಾರವು ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ನಿರ್ಲಕ್ಷಿಸಿದೆ.

ಬದ್ಲಾಪುರ ಘಟನೆಯನ್ನು ನಿಭಾಯಿಸಲು ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಛತ್ರಪತಿ ಶಿವಾಜಿಯವರ ನಾಡು ಇಂತಹ ಘಟನೆಗಳಿಗೆ ಸಾಕ್ಷಿಯಾಗಬಾರದು ಎಂದು ಅವರು ಒತ್ತಿ ಹೇಳಿದ್ದಾರೆ.

ಬಾರಾಮತಿ ಸಂಸದೆ ಮತ್ತು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News