'ಭಾರತ್ ಮಾತಾ' ಪ್ರತಿಯೊಬ್ಬ ಭಾರತೀಯನ ಧ್ವನಿ: ರಾಹುಲ್ ಗಾಂಧಿ

Update: 2023-08-15 05:51 GMT

ಹೊಸದಿಲ್ಲಿ: "ಭಾರತ್ ಮಾತಾ" ಎಷ್ಟೇ ದುರ್ಬಲ ಅಥವಾ ಬಲಶಾಲಿಯಾಗಿದ್ದರೂ ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಹೇಳಿದರು.

 ರಾಹುಲ್ ಗಾಂಧಿ ಇಂದು ದೇಶದ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ 'ಎಕ್ಸ್ 'ನಲ್ಲಿ ಈ ಕುರಿತು ಬರೆದಿರುವ , ಕಾಂಗ್ರೆಸ್ ನಾಯಕ, "ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ! ಎಲ್ಲಾ ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಹೇಳಿದ್ದಾರೆ.

'ಭಾರತ್ ಜೋಡೋ ಯಾತ್ರೆ'ಯ ಅನುಭವವನ್ನು ಸಹ ಕಾಂಗ್ರೆಸ್ ನಾಯಕ ಹಂಚಿಕೊಂಡಿದ್ದಾರೆ ಮತ್ತು ನಾನು 145 ದಿನಗಳ ನಡಿಗೆಯನ್ನು ಸಮುದ್ರದ ಅಂಚಿನಲ್ಲಿ ಆರಂಭಿಸಿ ಕಾಶ್ಮೀರದ ಹಿಮವನ್ನು ತಲುಪಿದ್ದೇನೆ ಎಂದು ಹೇಳಿದರು.

"ಕಳೆದ ವರ್ಷ ನಾನು ಮನೆ ಎಂದು ಕರೆಯುವ ಭೂಮಿಯಲ್ಲಿ ನೂರ ನಲವತ್ತೈದು ದಿನಗಳನ್ನು ಕಳೆದಿದ್ದೇನೆ, ನನ್ನ ಯಾತ್ರೆ ಸಮುದ್ರದ ಅಂಚಿನಲ್ಲಿ ಆರಂಭವಾಯಿತು ಮತ್ತು ಶಾಖ, ಧೂಳು ಮತ್ತು ಮಳೆಯ ಮೂಲಕ ನಡೆದಿದ್ದೇನೆ. ನಾನು ಮೃದುವಾದ ಹಿಮದಿಂದ ಆವೃತ   ನನ್ನ ಪ್ರೀತಿಯ ಕಾಶ್ಮೀರದ ತಲುಪುವ ತನಕ ಕಾಡುಗಳು, ಪಟ್ಟಣಗಳು ಮತ್ತು ಬೆಟ್ಟಗಳನ್ನು ದಾಟಿದ್ದೇನೆ ಎಂದು ಅವರು ಹೇಳಿದರು.

"ನನ್ನ ಪ್ರೀತಿಯ ವಸ್ತು ಇದ್ದಕ್ಕಿದ್ದಂತೆ ತನ್ನನ್ನು ತಾನೇ ಬಹಿರಂಗಪಡಿಸಿತು. ನನ್ನ ಪ್ರೀತಿಯ ಭಾರತ ಮಾತೆ ನಾಡಾಗಿರಲಿಲ್ಲ. ಇದು ಕಲ್ಪನೆಗಳ ಗುಂಪಾಗಿರಲಿಲ್ಲ. ಇದು ಒಂದು ನಿರ್ದಿಷ್ಟ ಸಂಸ್ಕೃತಿ, ಇತಿಹಾಸ ಅಥವಾ ಧರ್ಮವಾಗಿರಲಿಲ್ಲ. ಜನರು ನಿಗದಿಪಡಿಸಿದ ಜಾತಿಯೂ ಅಲ್ಲ. ಭಾರತವು ಎಷ್ಟೇ ದುರ್ಬಲ ಅಥವಾ ಬಲಶಾಲಿಯಾಗಿದ್ದರೂ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿತ್ತು. ಭಾರತವು ಎಲ್ಲಾ ಧ್ವನಿಗಳಲ್ಲಿ ಆಳವಾಗಿ ಅಡಗಿರುವ ಸಂತೋಷ, ಭಯ ಹಾಗೂ ನೋವಾಗಿದೆ" ಎಂದು ರಾಹುಲ್ ಹೇಳಿದರು.

ಯಾತ್ರೆಯ ಉದ್ದಕ್ಕೂ ಆಗಿರುವ ತಮ್ಮ ಅನುಭವವನ್ನು ಹಂಚಿಕೊಂಡ ರಾಹುಲ್ ಗಾಂಧಿ ಅವರು , “ಇದು ಎಷ್ಟು ಸರಳವಾಗಿದೆ. ಸಮುದ್ರದಲ್ಲಿ ಮಾತ್ರ ಸಿಗುವದನ್ನು ನಾನು ನದಿಯಲ್ಲಿ ಹುಡುಕುತ್ತಿದ್ದೆ'' ಎಂದರು.

"ಪದಗಳು ಹೃದಯದಿಂದ ಬಂದರೆ ಅವು ಹೃದಯವನ್ನು ಪ್ರವೇಶಿಸುತ್ತವೆ" ಎಂದು  ಪರ್ಷಿಯನ್ ಕವಿ ರೂಮಿಯನ್ನು ರಾಹುಲ್ ಗಾಂಧಿ ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News