ನಾಗ್ಪುರದ ಡಾಲಿ ಚಾಯ್ ವಾಲಾ ಭೇಟಿಯಾಗಿ ಚಹಾ ಸವಿದ ಬಿಲ್ ಗೇಟ್ಸ್!
ಮುಂಬೈ : ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮ ದೇಸಿ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊ ಕ್ಲಿಪ್‌ನಲ್ಲಿ, ಬಿಲ್ ಗೇಟ್ಸ್ ನಾಗ್ಪುರದಲ್ಲಿ ಚಹಾ ಆನಂದಿಸುತ್ತಿರುವುದನ್ನು ಕಾಣಬಹುದು.
ನಾಗ್ಪುರದ ಖ್ಯಾತ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾ ಅವರು ಮಾಡಿರುವ ಚಹಾವನ್ನು ಬಿಲ್ ಗೇಟ್ಸ್ ಅವರು ಕುಡಿಯುತ್ತಿರುವ ವೀಡಿಯೊ ವೈರಲ್ ಆಗಿದೆ. ಬಿಲ್ ಗೇಟ್ಸ್ ಚಹಾ ಕುಡಿಯುತ್ತಿರುವ ವೀಡಿಯೊಗೆ ಜನರು ಖುಷಿಯಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಇದನ್ನು "ಅತ್ಯಂತ ಅನಿರೀಕ್ಷಿತ ಸಹಯೋಗ" ಎಂದಿದ್ದಾರೆ ಎಂದು ndtv ವರದಿ ಮಾಡಿದೆ.
ತನ್ನ ನಾವೀನ್ಯತೆ ಪ್ರಯತ್ನಗಳಿಗೆ ಹೆಸರುವಾಸಿಯಾದ ಗೇಟ್ಸ್, "ಭಾರತದಲ್ಲಿ, ನೀವು ಎಲ್ಲೆಡೆ ಹೊಸತನವನ್ನು ಕಾಣಬಹುದು - ಸರಳ ಕಪ್ ಚಹಾದ ತಯಾರಿಕೆಯಲ್ಲಿಯೂ ಕೂಡ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಬಿಲ್ ಗೇಟ್ಸ್ ಡಾಲಿ ಚಾಯ್ ವಾಲಾ ಬಳಿ "ವನ್ ಚಾಯ್, ಪ್ಲೀಸ್" ಎಂದು ವಿನಂತಿಸುತ್ತಿರುವುದನ್ನು ವೀಡಿಯೊ ತುಣುಕಿನಲ್ಲಿ ತೋರಿಸಲಾಗಿದೆ.
ಡಾಲಿ ಚಾಯ್‌ವಾಲಾ ವಿಶೇಷವಾಗಿ ಚಹಾ ತಯಾರಿಸುವುದನ್ನು ಪ್ರದರ್ಶಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕುದಿಯುವ ನೀರಿಗೆ ಮಸಾಲೆಗಳನ್ನು ಸೇರಿಸುವುದು, ಕುದಿಯುವ ಹಾಲಿನಲ್ಲಿ ಚಹಾ ಎಲೆಗಳನ್ನು ಕುದಿಸಿ, ತನ್ನದೇ ವಿಶಿಷ್ಟ ಶೈಲಿಯಲ್ಲಿ ಅದನ್ನು ಕೊಡುವ ಡಾಲಿ ಚಾಯ್ ವಾಲಾ ಅವರ ಚಹಾ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊ ಸೆರೆಹಿಡಿದಿದೆ.
ಬಿಲ್ ಗೇಟ್ಸ್ ಅವರು ವೀಡಿಯೊ ಪೋಸ್ಟ್ ಮಾಡಿದ ಕೇವಲ 14 ಗಂಟೆಗಳಲ್ಲಿ 14 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಫುಡ್ ಡೆಲಿವರಿ ಸಂಸ್ಥೆ, ಸ್ವಿಗ್ಗಿ, "ಬಿಲ್ ಎಷ್ಟು?" ಎಂದು ಕಾಮೆಂಟ್ ಮಾಡಿದೆ.
"ಮೈಕ್ರೋಸಾಫ್ಟ್ ಈಗ ಚಹಾಕ್ಕಾಗಿ ಡಾಲಿಯನ್ನು ನೇಮಿಸಿಕೊಂಡಿದೆ" ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಚಾಯ್‌ವಾಲಾ "ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಡಾಲಿ ಚಾಯ್ ವಾಲ ನಾಗ್ಪುರದ ʼಸೆಲೆಬ್ರಿಟಿʼ ಚಹಾ ತಯಾರಕ. ಬೀದಿಯಲ್ಲಿ ಆತನ ಚಹಾ ಗಾಡಿಯ ಮುಂದೆ ಚಹಾ ಕುಡಿಯಲು ಜನ ಸಾಗರವೇ ಸೇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಆತನ ಖ್ಯಾತಿ ದೇಶದಾದ್ಯಂತ ಹಬ್ಬಿದೆ. ಬಿಲ್ ಗೇಟ್ಸ್ ಗಾಗಿ ಅಜ್ಞಾತ ಸ್ಥಳವೊಂದರಲ್ಲಿ ಚಾಯ್ ವಾಲಾ ಅವರ ಜೊತೆಗಿನ ವೀಡಿಯೊ ಶೂಟ್ ನಡೆದಿದೆ.
ನಾನು ಚಹಾ ಕುಡಿಸಿದ್ದು ಬಿಲ್ ಗೇಟ್ಸ್‌ಗೆ ಎಂದು ಗೊತ್ತೇ ಇರಲಿಲ್ಲ!
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಗೆ ಚಹಾ ಮಾಡಿಕೊಟ್ಟು ಡಾಲಿ ಚಾಯ್‌ವಾಲ ವೀಡಿಯೊ ವೈರಲಾಗುತ್ತಿದ್ದಂತೆ, ಡಾಲಿಯನ್ನು ಸಂಪರ್ಕಿಸಿದ ಎನ್ ಎನ್ ಐ ಸುದ್ದಿಸಂಸ್ಥೆಗೆ "ನಾನು ನಾನು ಚಹಾ ಕುಡಿಸಿದ್ದು ಬಿಲ್ ಗೇಟ್ಸ್ ಗೆ ಎಂದು ಗೊತ್ತೇ ಇರಲಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
"ಕಾರ್ಯಕ್ರಮದ ಸಂಘಟಕರು ನನ್ನನ್ನು ಸಂಪರ್ಕಿಸಿ ವಿದೇಶಿ ವ್ಯಕ್ತಿಯೋರ್ವರಿಗೆ ಚಹಾ ಮಾಡಿಕೊಡಬೇಕು ಎಂದು ಹೇಳಿದ್ದರು. ಅದರಂತೆ ನಾನು ಚಹಾ ತಯಾರಿಸಿಕೊಟ್ಟೆ. ಇಂದು ನಾಗ್ಪುರಕ್ಕೆ ವಾಪಾಸ್ಸು ಬಂದಾಗಲೇ ನನಗೆ ತಿಳಿದಿದ್ದು, ನಾನು ಚಹಾ ಮಾಡಿಕೊಟ್ಟದ್ದು ಬಿಲ್ ಗೇಟ್ಸ್ ಗೆ ಎಂದು" ಎಂದು ನಗುತ್ತಾ ಹೇಳಿದರು.
"ಬಿಲ್ ಗೇಟ್ಸ್ ಗೆ ಚಹಾ ಮಾಡಿಕೊಟ್ಟಿದ್ದು ಖುಷಿಯ ವಿಚಾರ. ನಾನು ಜನರಿಗೆ ನಗುತ್ತಾ ಚಹಾ ಕುಡಿಸಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಬಂದರೆ ಅವರಿಗೂ ಚಹಾ ಮಾಡಿ ಕೊಟ್ಟು ಕುಡಿಸುವ ಆಸೆಯಿದೆ" ಎಂದರು.
ಡಾಲಿ ಚಾಯ್‌ವಾಲಾ ತಮ್ಮ ಸಿನಿಮೀಯ ಸ್ಟೈಲ್ ಗಳಿಂದಲೇ ಹೆಚ್ಚು ಹೆಸರುವಾಸಿ. "ನಾನು ದಕ್ಷಿಣ ಭಾರತದ ಸಿನಿಮಾಗಳನ್ನು ನೋಡುತ್ತೇನೆ. ನನ್ನ ಸ್ಟೈಲ್ ನಾನು ದಕ್ಷಿಣ ಭಾರತದ ಸಿನಿಮಾಗಳಿಂದ ಕಾಪಿ ಮಾಡಿದ್ದೇನೆ" ಎಂದು ತಮ್ಮ ಸ್ಟೈಲ್ ಬಗ್ಗೆ ಹೇಳಿದ್ದಾರೆ.