ಬಿಜೆಪಿ ನನ್ನ ಹೇಳಿಕೆಯನ್ನು ತಿರುಚುತ್ತಿದೆ : ಉದಯನಿಧಿ ಸ್ಟಾಲಿನ್

Update: 2023-09-04 15:41 GMT

ಉದಯನಿಧಿ ಸ್ಟಾಲಿನ್ | Photo : PTI

ಚೆನ್ನೈ: ಸನಾತನ ಧರ್ಮ ಕುರಿತು ತನ್ನ ಹೇಳಿಕೆಯು ವಿವಾದವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು, ಬಿಜೆಪಿಯು ತನ್ನ ಹೇಳಿಕೆಯನ್ನು ತಿರುಚುತ್ತಿದೆ ಮತ್ತು ಸುಳ್ಳುಸುದ್ದಿಗಳನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಾನು ಸನಾತನ ಧರ್ಮವನ್ನು ಮಾತ್ರ ಟೀಕಿಸಿದ್ದೆ ಮತ್ತು ಸನಾತನ ಧರ್ಮವನ್ನು ನಿರ್ಮೂಲನಗೊಳಿಸಬೇಕು ಎಂದು ಮತ್ತೆ ಹೇಳುತ್ತಿದ್ದೇನೆ. ನಾನು ಇದನ್ನು ನಿರಂತರವಾಗಿ ಹೇಳುತ್ತೇನೆ. ನಾನು ನರಮೇಧಕ್ಕೆ ಕರೆ ನೀಡಿದ್ದೇನೆ ಎಂದು ಕೆಲವರು ಬಾಲಿಶವಾಗಿ ಹೇಳುತ್ತಿದ್ದಾರೆ,ಇತರರು ದ್ರಾವಿಡವಾದವನ್ನು ನಿರ್ಮೂಲನಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಡಿಎಂಕೆಯವರನ್ನು ಕೊಲ್ಲಬೇಕು ಎಂದು ಹೇಳಿಕೆ ನೀಡುತ್ತಿರುವುದರ ಅರ್ಥವೇ? ಪ್ರಧಾನಿ ಮೋದಿಯವರು ‘ಕಾಂಗ್ರೆಸ್ ಮುಕ್ತ ಭಾರತ ’ಎಂದು ಹೇಳಿದಾಗ ಕಾಂಗ್ರೆಸಿಗರನ್ನು ಕೊಲ್ಲಬೇಕು ಎನ್ನುವುದು ಅದರ ಅರ್ಥವೇ ಎಂದು ಪ್ರಶ್ನಿಸಿದರು.

ಸನಾತನ ಎಂದರೇನು? ಸನಾತನ ಎಂದರೆ ಯಾವುದನ್ನೂ ಬದಲಿಸಬಾರದು ಮತ್ತು ಎಲ್ಲವೂ ಶಾಶ್ವತ ಎಂದು ಅರ್ಥ. ಆದರೆ ದ್ರಾವಿಡ ಮಾದರಿಯು ಬದಲಾವಣೆಗೆ ಕರೆ ನೀಡುತ್ತದೆ ಮತ್ತು ಎಲ್ಲರೂ ಸಮಾನವಾಗಿರಬೇಕು ಎಂದು ಹೇಳುತ್ತದೆ. ಬಿಜೆಪಿಯವರಿಗೆ ಇದು ಮಾಮೂಲಿ ಕೆಲಸವಾಗಿದೆ ಎಂದು ಹೇಳಿದ ಉದಯನಿಧಿ, ‘ಅವರು ನನ್ನ ವಿರುದ್ಧ ಏನೇ ಪ್ರಕರಣಗಳನ್ನು ದಾಖಲಿಸಿದರೂ ಎದುರಿಸಲು ನಾನು ಸಿದ್ಧನಿದ್ದೇನೆ. ಬಿಜೆಪಿಗೆ ಇಂಡಿಯಾ ಮೈತ್ರಿಕೂಟದ ಬಗ್ಗೆ ಭಯವಿದೆ ಮತ್ತು ಅದರಿಂದ ವಿಷಯಾಂತರಕ್ಕಾಗಿ ಇದನ್ನೆಲ್ಲ ಹೇಳುತ್ತಿದ್ದಾರೆ. ಒಂದೇ ಕುಲ, ಒಂದೇ ದೇವರು ಎನ್ನುವುದು ಡಿಎಂಕೆಯ ನೀತಿಯಾಗಿದೆʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News