ಬಿಜೆಪಿಯವರು ಬಿಲ್ಕಿಸ್ ಬಾನು, ಮಹಿಳಾ ಕುಸ್ತಿಪಟುಗಳಿಗೆ ರಾಖಿ ಕಟ್ಟಲಿ: ಉದ್ಧವ್ ಠಾಕ್ರೆ
ಮುಂಬೈ: ಇವತ್ತು ರಕ್ಷಾ ಬಂಧನ. ಮಣಿಪುರದ ಮಹಿಳೆಯರಿಗೆ, ಬಿಲ್ಕಿಸ್ ಬಾನು, ಮಹಿಳಾ ಕುಸ್ತಿ ಪಟುಗಳಿಗೆ ರಾಖಿ ಕಟ್ಟಲು ಬಿಜೆಪಿ ಮುಂದೆ ಬರಬೇಕು. ಅವರಿಗೂ ಈ ದೇಶದಲ್ಲಿ ಸುರಕ್ಷಿತರಾಗಿದ್ದೇವೆ ಎಂಬ ಭಾವನೆಗೆ ಬರಬೇಕು. ಹಾಗಾಗಿಯೇ ನಾವೆಲ್ಲರೂ ʼಇಂಡಿಯಾʼದ ಮುಖಾಂತರ ಮುಂದೆ ಬಂದಿದ್ದೇವೆ ಎಂದು ಶಿವಸೇನೆ ಯುಬಿಟಿ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈನಲ್ಲಿ ಶಿವಸೇನೆ ಯುಬಿಟಿ ಬಣ ಆಯೋಜಿಸಿರುವ ʼಇಂಡಿಯಾʼದ ಮೂರನೇ ಸಭೆಗೆ ಪೂರ್ವಭಾವಿಯಾಗಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ಬಿಟಿ ಬಣದ ಮುಖಂಡ ಸಂಜಯ್ ರಾವುತ್, ಇಂಡಿಯಾದ ಎರಡು ಸಭೆಗಳಿಗೆ ಹೆದರಿ ಅಡುಗೆ ಅನಿಲದ ಬೆಲೆ 200 ರೂ. ಇಳಿಸಿದ್ದಾರೆ ಎಂದು ವ್ಯಂಗವಾಡಿದ್ದಾರೆ.
ಇಂಡಿಯಾದ ಮುಂಬೈ ಸಭೆಯ ಬಗ್ಗೆ ಮಾಹಿತಿ ನೀಡಿದ ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್, ಸಭೆಯಲ್ಲಿ ಕನಿಷ್ಠ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಸೀಟು ಹಂಚಿಕೆಯ ವಿಚಾರ ನಮ್ಮ ಮುಂದೆ ಈಗ ಇಲ್ಲ. ಎಲ್ಲಾ ನಾಯಕರು ಜೊತೆಗೂಡಿ ಕನಿಷ್ಠ ಕಾಯಕ್ರಮದ ಬಗ್ಗೆ ಚರ್ಚೆ ನಡೆಸಿದ ಬಳಿಕ ಸೀಟು ಹಂಚಿಕೆಯ ವಿಚಾರ ಚರ್ಚೆಗೆ ಬಂದರೂ ಬರಬಹುದು ಎಂದರು.
ನಾಳೆ ನಡೆಯುವ ಇಂಡಿಯಾದ ಸಭೆಯಲ್ಲಿ 28 ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಇಂಡಿಯಾದ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ಈ ಕೂಟಕ್ಕೆ ಇಂಡಿಯಾ ಎಂದು ಅಲ್ಲಿ ಹೆಸರಿಸಲಾಗಿತ್ತು. ನಾಳೆ ಮುಂಬೈನಲ್ಲಿ ನಡೆಯುವ ಸಭೆಯಲ್ಲಿ 11 ಮಂದಿ ಸಮನ್ವಯ ಸಮಿತಿಯನ್ನು ರಚಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.