ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರನಿಗೆ ಬಿಜೆಪಿ ಟಿಕೆಟ್

Update: 2024-04-11 02:21 GMT

Photo: twitter.com/ImVishalSingh07

ಹೊಸದಿಲ್ಲಿ: ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅವರನ್ನು ಉತ್ತರ ಪ್ರದೇಶದ ಬಲಿಯಾ ಕ್ಷೇತ್ರದಿಂದ ಬಿಜೆಪಿ ಕಣಕ್ಕೆ ಇಳಿಸಿದೆ. ಅಂತೆಯೇ ಚಂಡೀಗಢ ಸಂಸದ ಕಿರಣ್ ಖೇರ್ ಅವರಿಗೆ ಕೊಕ್ ನೀಡಿರುವ ಪಕ್ಷ ಸಂಜಯ್ ಟಂಡನ್ ಅವರಿಗೆ ಟಿಕೆಟ್ ನೀಡಿದೆ.

ಬುರ್ದುವಾನ್-ದುರ್ಗಾಪುರ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಸ್.ಅಹ್ಲುವಾಲಿಯಾ ಅವರ ಕ್ಷೇತ್ರವನ್ನು ಬದಲಿಸಲಾಗಿದ್ದು, ಅಸನ್ಸಾಲ್ ಕ್ಷೇತ್ರದಿಂದ ಅವರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಟಿಎಂಸಿಯ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಅವರನ್ನು ಅಹ್ಲುವಾಲಿಯಾ ಎದುರಿಸಲಿದ್ದಾರೆ.

ಸಮಾಜವಾದಿ ಪಕ್ಷದ ಸದಸ್ಯರಾಗಿ ರಾಜ್ಯಸಭೆ ಪ್ರವೇಶಿಸಿದ್ದ ನೀರಜ್ ಶೇಖರ್, ತಮ್ಮ ತಂದೆ ಹಲವು ಬಾರಿ ಪ್ರತಿನಿಧಿಸಿದ್ದ ಬಲಿಯಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸಮಾಜವಾದಿ ಪಕ್ಷ ಅವರನ್ನು ಕಣಕ್ಕೆ ಇಳಿಸದ ಹಿನ್ನೆಲೆಯಲ್ಲಿ ಪಕ್ಷಾಂತರ ಮಾಡಿದ್ದರು.

ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವೀರೇಂದ್ರ ಸಿಂಗ್ ಮಸ್ತ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಗೌರವಾರ್ಥ ಸಭಾಗೃಹವೊಂದನ್ನು ನಿರ್ಮಿಸಬೇಕು ಎಂದು ಹೇಳಿಕೆ ನೀಡುವ ಮೂಲಕ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು.

ಅಲಹಾಬಾದ್ ನ ಹಾಲಿ ಸಂಸದೆ ರೀಟಾ ಬಹುಗುಣ ಜೋಶಿ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಹಿರಿಯ ಮುಖಂಡ ದಿವಂಗತ ಕೇಸರಿನಾಥ್ ತ್ರಿಪಾಠಿ ಅವರ ಮಗ ನೀರಜ್ ತ್ರಿಪಾಠಿ ಅವರನ್ನು ಕಣಕ್ಕೆ ಇಳಿಸಿದೆ. ಅಂತೆಯೇ ಫೂಲ್ ಪುರ ಸಂಸದೆ ಕೇಸರಿ ದೇವಿ, ಪ್ರವೀಣ್ ಪಟೇಲ್ ಅವರ ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದಾರೆ.

ಇದರೊಂದಿಗೆ ಬಿಜೆಪಿ 12 ಮಂದಿ ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ನಿರಾಕರಿಸಿದಂತಾಗಿದ್ದು, 75 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ಚಂಡೀಗಢ ಕ್ಷೇತ್ರದಲ್ಲಿ ಖೇರ್ ಬದಲು ಬಿಜೆಪಿಯ ಹಿರಿಯ ಮುಖಂಡ ಬಲರಾಂ ದಾಸ್ ತಂಡನ್ ಅವರು ಸ್ಪರ್ಧಿಸಲಿದ್ದಾರೆ. ಇವರು 2010ರಿಂದ ಒಂಬತ್ತು ವರ್ಷ ಕಾಲ ಚಂಡೀಗಢ ಘಟಕದ ಅಧ್ಯಕ್ಷರಾಗಿದ್ದರು. ತಾವು ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಖೇರ್ ಪ್ರತಿಕ್ರಿಯಿಸಿದ್ದಾರೆ. ಉತ್ತರಾಖಂಡದ ಡಾರ್ಜಿಲಿಂಗ್ ಕ್ಷೇತ್ರವನ್ನು ಸ್ಪರ್ಧಿಸುತ್ತಿದ್ದ ಅಹ್ಲುವಾಲಿಯಾ ಅವರನ್ನು ಬರ್ದ್ವಾನ್ ಕ್ಷೇತ್ರಕ್ಕೆ ಸ್ಥಳಾಂತರಿಸಲಾಗಿದೆ.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News