ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಮುಂದಾದ ಬಿಜೆಪಿ

Update: 2023-12-24 02:44 GMT

Photo: twitter.com/JPNadda

ಹೊಸದಿಲ್ಲಿ: ಬಿಜೆಪಿಯ ಧೀರ್ಘಕಾಲದ ಭರವಸೆಯಾದ ಸಮಾನ ನಾಗರಿಕ ಸಂಹಿತೆಯನ್ನು ಈಡೇರಿಸುವ ಪ್ರತಿಪಾದನೆಯೊಂದಿಗೆ 2024ರ ಲೋಕಸಭಾ ಚುನಾವಣೆ ಎದುರಿಸಲು ಪಕ್ಷ ಸಜ್ಜಾಗಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಹಲವು ದಶಕಗಳಿಂದ ಇದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಸಂವಿಧಾನದ 370ನೇ ವಿಧಿ ರದ್ದತಿ ಭರವಸೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಮತ್ತೊಂದು ಪ್ರಮುಖ ಭರವಸೆಯಾದ ಸಮಾನ ನಾಗರಿಕ ಸಂಹಿತೆಯನ್ನು ಉತ್ತರಾಖಂಡದಲ್ಲಿ ಜಾರಿಗೆ ತರುವುದು ಪಕ್ಷದ ಉದ್ದೇಶ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಉತ್ತರಾಖಂಡ ಸರ್ಕಾರ ಯುಸಿಸಿಯನ್ನು ಜನವರಿಯಲ್ಲಿ ಜಾರಿಗೊಳಿಸಲು ಮುಂದಾಗಿದ್ದು, ಇದರ ಕರಡು ಆಧಾರದಲ್ಲಿ ಇಡೀ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಪಕ್ಷದ ಕಾರ್ಯತಂತ್ರವಾಗಿದೆ.

ಈ ವಿಷಯ ಸಂವಿಧಾನದ ಇತರ ವಿಷಯಗಳ ಪಟ್ಟಿಯಲ್ಲಿದ್ದು, ಇದರ ಪ್ರಕಾರ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಕಾನೂನನ್ನು ಜಾರಿಗೊಳಿಸದೇ, ರಾಜ್ಯಗಳು ತಮ್ಮ ಕರಡನ್ನು ತಾವೇ ಸಿದ್ಧಪಡಿಸಿಕೊಳ್ಳಲು ಅವಕಾಶವಿರುತ್ತದೆ. ಆದರೆ ಪಕ್ಷ ತನ್ನ ಸ್ವಂತ ಬಲದಲ್ಲಿ ಸರ್ಕಾರ ರಚಿಸಿರುವ 10 ರಾಜ್ಯಗಳಲ್ಲಿ ಇದನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

ಉತ್ತರಾಖಂಡದಲ್ಲಿ ಇದು ಹೇಗೆ ಜಾರಿಯಾಗುತ್ತದೆ ಎನ್ನುವುದನ್ನು ಪರಾಮರ್ಶೆ ನಡೆಸಿದ ಬಳಿಕ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಛತ್ತೀಸ್ಗಢ, ಹರ್ಯಾಣ, ಮಹಾರಾಷ್ಟ್ರ, ಅಸ್ಸಾಂ, ತ್ರಿಪುರಾ ಮತ್ತು ಮಣಿಪುರದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

"ನಾವು ಜನರ ಬಳಿಗೆ ತೆರಳಿ, ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಮತ್ತು ಧರ್ಮ ಇದಕ್ಕೆ ಮಾನಂಡವಾಗಬಾರದು ಎಂಬ ಬಗ್ಗೆ ಮನವರಿಕೆ ಮಾಡಲಿದ್ದೇವೆ. ಹೊಸ ಕಾನೂನಿಗೆ ಜನ ಧನಾತ್ಮಕವಾಗಿ ಸ್ಪಂದಿಸಿದಾಗ ಯುಸಿಸಿ ವಿರೋಧಿಸುವ ಎಲ್ಲರೂ ಮೂಲೆಗುಂಪಾಗಲಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News