ಪಶ್ಚಿಮ ಬಂಗಾಳ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೃತರ ಸಂಖ್ಯೆ 9ಕ್ಕೆ ಏರಿಕೆ
ಭಾರೀ ಸ್ಫೋಟ ಸಂಭವಿಸಿದ ಪಶ್ಚಿಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಮತ್ತೊಂದು ಮೃತದೇಹ ಸೋಮವಾರ ಪತ್ತೆಯಾಗಿದೆ.
ಕೋಲ್ಕತ್ತ: ಭಾರೀ ಸ್ಫೋಟ ಸಂಭವಿಸಿದ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಮತ್ತೊಂದು ಮೃತದೇಹ ಸೋಮವಾರ ಪತ್ತೆಯಾಗಿದೆ. ಇದರೊಂದಿಗೆ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಘಟನೆ ನಡೆದ ಸ್ಥಳದ ಸಮೀಪದ ಹೊಂಡವೊಂದರಲ್ಲಿ ವ್ಯಕ್ತಿಯೊಬ್ಬರ ತಲೆಯಿಲ್ಲದ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ಈತ ಪಟಾಕಿ ಕಾರ್ಖಾನೆಯ ಮಾಲಿಕನ ಪಾಲುದಾರ ಎಂದು ಶಂಕಿಸಲಾಗಿದೆ. ಈತನ ವಿರುದ್ಧ ಸ್ಫೋಟಕ ಕಾಯ್ದೆ 1984 ಹಾಗೂ ಸ್ಫೋಟಕ ನಿಯಮ 2008ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇತರ ಮೂವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಶೋಧ ಕಾರ್ಯಾಚರಣೆ ರಾತ್ರಿಯಿಡೀ ಮುಂದುವರಿಯಿತು. ಆದರೆ, ಈ ಪ್ರದೇಶದಲ್ಲಿ ವಿದ್ಯುತ್ ಕೊರತೆ ಇದ್ದುದರಿಂದ ಹಾಗೂ ಕಟ್ಟಡದ ಅವಶೇಷಗಳು ರಾಶಿ ಬಿದ್ದಿರುವುದರಿಂದ ಶೋಧ ಕಾರ್ಯಾಚರಣೆ ಹಾಗೂ ತನಿಖೆಗೆ ಅಡ್ಡಿ ಉಂಟಾಯಿತು. ನಾವು ಪಟಾಕಿ ಕಾರ್ಖಾನೆಯ ಮಾಲಕನ ಉದ್ಯಮ ಪಾಲುದಾರರೋರ್ವರನ್ನು ಬಂಧಿಸಿದ್ದೇವೆ’’ ಎಂದು ಬರಾಸತ್ ಪೊಲೀಸ್ ಡಿಸ್ಟ್ರಿಕ್ಟ್ನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ರವಿವಾರ ಬೆಳಗ್ಗೆ 8.30ಕ್ಕೆ ಸ್ಫೋಟ ಸಂಭವಿಸಿತ್ತು. ಸ್ಫೋಟದ ಪರಿಣಾಮ ಕಾರ್ಖಾನೆಯ ಸಮೀಪದ ಸುಮಾರು 50 ಮನೆಗಳಿಗೆ ಹಾನಿ ಉಂಟಾಗಿದೆ