ತಂದೆಯ ಹೆಸರಿಲ್ಲದೆ, ಟ್ರಾನ್ಸ್ ಜೆಂಡರ್ ಮಹಿಳೆಯನ್ನು ʼತಾಯಿʼ ಎಂದು ಉಲ್ಲೇಖಿಸಿ ಪುತ್ರನಿಗೆ ಪಾಸ್ ಪೋರ್ಟ್: ಭಾರತದಲ್ಲಿ ಇದೇ ಮೊದಲು!
ಬೆಂಗಳೂರು: ಮಾನವ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರ ಐದು ವರ್ಷದ ಮಗ ಅವಿನ್ ಅಕ್ಕೈ ಪದ್ಮಶಾಲಿಗೆ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯು ತಂದೆಯ ಹೆಸರನ್ನು ಉಲ್ಲೇಖಿಸದೆ ಪಾಸ್ಪೋರ್ಟ್ ನೀಡಿದ್ದು, ಪಾಸ್ಪೋರ್ಟ್ ನಲ್ಲಿ ತಂದೆಯ ಹೆಸರಿಲ್ಲದೆ, ಲಿಂಗತ್ವ ಅಲ್ಪಸಂಖ್ಯಾತ (ಟ್ರಾನ್ಸ್ಜೆಂಡರ್) ಮಹಿಳೆಯ ಹೆಸರನ್ನು ಮಾತ್ರ ತಾಯಿ ಎಂದು ನಮೂದಿಸಿರುವುದು ಭಾರತದಲ್ಲಿ ಇದೇ ಮೊದಲಾಗಿದೆ.
ಸಿಸ್ಜೆಂಡರ್ (cisgender) ಪತಿ ವಾಸುದೇವ್ ವಿ ಯಿಂದ ವಿಚ್ಛೇದನವನ್ನು ಪಡೆದಿರುವ ಅಕ್ಕೈ ಪದ್ಮಶಾಲಿ ಅವರು ತಮ್ಮ ದತ್ತುಪುತ್ರನ ಪಾಲನೆಯ ಜವಾಬ್ಧಾರಿ ವಹಿಸಿಕೊಂಡಿದ್ದರು. ಪಾಸ್ ಪೋರ್ಟ್ ನೀಡಿದ ಈ ನಿರ್ಧಾರವು ಮಹತ್ವದ ಹೆಜ್ಜೆಯಾಗಿದೆ. ವಿಚ್ಛೇದಿತೆ, ಟ್ರಾನ್ಸ್ ಮಹಿಳೆ ಎದುರಿಸುತ್ತಿರುವ ಸವಾಲುಗಳನ್ನು ಇದು ಎತ್ತಿ ತೋರಿಸುತ್ತದೆ. ಸರ್ಕಾರವು ಈ ಸವಾಲುಗಳನ್ನು ಒಪ್ಪಿಕೊಂಡು ಮಹತ್ವದ ಕ್ರಮವನ್ನು ಕೈಗೊಂಡಿದೆ ಎಂದು ಅಕ್ಕೈ ಪದ್ಮಶಾಲಿ ಹೇಳಿದ್ದಾರೆ.
ಪಾಸ್ ಪೋರ್ಟ್ನಲ್ಲಿ ತಂದೆಯ ಹೆಸರಿಲ್ಲದೆ, ಟ್ರಾನ್ಸ್ ಜೆಂಡರ್ ಮಹಿಳೆಯ ಹೆಸರನ್ನು ಮಾತ್ರ ತಾಯಿ ಎಂದು ನಮೂದಿಸಿರುವುದು ಭಾರತದಲ್ಲಿ ಇದೇ ಮೊದಲಾಗಿದೆ. ತಂದೆಯ ಹೆಸರಿಲ್ಲದೆ ನೀಡಲಾದ ಪಾಸ್ಪೋರ್ಟ್, ದೇಶದಲ್ಲಿ ಟ್ರಾನ್ಸ್ ಜೆಂಡರ್ ಪೋಷಕರ ಹಕ್ಕುಗಳು ಮತ್ತು ಗುರುತನ್ನು ಗುರುತಿಸುವಲ್ಲಿ ಪ್ರಗತಿಶೀಲ ಬೆಳವಣಿಗೆಯಾಗಿದೆ.
2017ರಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರು ವಾಸುದೇವ್ ವಿ ಅವರ ಜೊತೆ ವೈವಾಹಿಕ ಜೀವನಕ್ಕೆ ಪಾದಾರ್ಪನೆ ಮಾಡಿದ್ದರು. 2018ರಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ ಅಕ್ಕೈ ಮತ್ತು ವಾಸುದೇವ್ ಅವರು 2019ರಲ್ಲಿ ಮಗುವನ್ನು ದತ್ತು ಪಡೆದಿದ್ದರು. ಅಕ್ಕೈ ತನ್ನ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಿದ ಭಾರತದ ಮೊದಲ ಟ್ರಾನ್ಸ್ಜೆಂಡರ್ ಮಹಿಳೆ ಕೂಡ ಆಗಿದ್ದಾರೆ.