100 ಶಾಸಕರನ್ನು ಕರೆತನ್ನಿ, ಸರ್ಕಾರ ರಚಿಸಿ : ಮಾನ್ಸೂನ್ ಆಫರ್ ನೀಡಿದ ಅಖಿಲೇಶ್ ಯಾದವ್!
ಲಕ್ನೋ : ಉತ್ತರ ಪ್ರದೇಶ ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗುತ್ತಿದ್ದಂತೆ, 100 ಶಾಸಕರನ್ನು ಕರೆತನ್ನಿ, ಸರ್ಕಾರ ರಚಿಸಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಅಖಿಲೇಶ್ ಯಾರನ್ನೂ ಹೆಸರಿಸದಿದ್ದರೂ, ಪರೋಕ್ಷವಾಗಿ ಅದು ಬಿಜೆಪಿ ಶಾಸಕರಿಗೆ ಹೇಳಿರುವಂತಿದೆ ಎಂದು ರಾಜಕೀಯ ಕ್ಷೇತ್ರದಲ್ಲಿ ವ್ಯಾಖ್ಯಾನಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಗ್ಗೆ ಅಸಮಾಧಾನ ಇದ್ದು, ಪಕ್ಷ ತೊರೆಯಲು ನಿರ್ಧರಿಸಿದವರಿಗೆ ಅಖಿಲೇಶ್ ಆಹ್ವಾನ ನೀಡಿದ್ದಾರೆ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.
‘2022ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯ 100 ಅತೃಪ್ತ ಶಾಸಕರು ಬಂದರೆ ನಾವು ಸರ್ಕಾರ ರಚನೆ ಮಾಡಬಹುದು’ ಎಂದು ಅವರು ಹೇಳಿದ್ದಾರೆ.
‘ಸರ್ಕಾರವು ಪಕ್ಷಕ್ಕಿಂತ ದೊಡ್ಡದಲ್ಲ’ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಳಿಕ, ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದಲ್ಲಿ ಭಿನ್ನಮತ ಬುಗಿಲೆದ್ದಿತ್ತು.