ಉತ್ತರ ಪ್ರದೇಶ: 16 ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಎಸ್ಪಿ ಮೈತ್ರಿ ಅಭ್ಯರ್ಥಿಗಳಿಗೆ ಮುಳುವಾದ ಬಿಎಸ್‌ಪಿ ಸ್ಪರ್ಧೆ

Update: 2024-06-06 07:38 GMT

ಮಾಯಾವತಿ |  PC : PTI  

ಹೊಸದಿಲ್ಲಿ: ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (BSP) ಉತ್ತರ ಪ್ರದೇಶದಲ್ಲಿ ಯಾವುದೇ ಕ್ಷೇತ್ರದಲ್ಲಿ ಜಯ ಗಳಿಸದೇ ಇದ್ದರೂ ಬಿಜೆಪಿ ಅಥವಾ ಅದರ ಮಿತ್ರ ಪಕ್ಷದ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ಬಿಎಸ್‌ಪಿ 16 ಕ್ಷೇತ್ರಗಳಲ್ಲಿ ಪಡೆದಿದೆ. ಈ 16 ಕ್ಷೇತ್ರಗಳ ಪೈಕಿ 14ರಲ್ಲಿ ಬಿಜೆಪಿ ಜಯಗಳಿಸಿದ್ದರೆ ಎರಡು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಲೋಕದಳ ಮತ್ತು ಅಪ್ನಾ ದಳ ಜಯ ಗಳಿಸಿವೆ. ಈ 16 ಕ್ಷೇತ್ರಗಳಲ್ಲೂ ಬಿಎಸ್ಪಿ ಸ್ಪರ್ಧಿಸದೇ ಇಂಡಿಯಾ ಮೈತ್ರಿಕೂಟ ಜಯ ಗಳಿಸಿದ್ದರೆ ಯುಪಿಯಲ್ಲಿ ಬಿಜೆಪಿ ಸೀಟು ಈಗ ಗೆದ್ದಿರುವ 33 ರಿಂದ ಕೇವಲ 19ಕ್ಕೆ ಕುಸಿಯುತ್ತಿತ್ತು. ಎನ್‌ಡಿಎಯ ಒಟ್ಟು ಸ್ಥಾನಗಳು 278 ಕ್ಕೆ ಹಾಗೂ ಬಿಜೆಪಿಯ ಒಟ್ಟು ಸ್ಥಾನ 226ಕ್ಕೆ ಇಳಿಯುತ್ತಿತ್ತು.

ಈ 16 ಕ್ಷೇತ್ರಗಳ್ಯಾವುವು ಎಂದರೆ ಅಕ್ಬರ್‌ಪುರ್‌, ಆಲಿಘರ್‌, ಅಮ್ರೋಹ, ಬನಸ್ಗಾಂವ್‌, ಭದೋಹಿ, ಬಿಜ್ನೋರ್‌‌‌, ದಿಯೋರಿಯಾ, ಫರುಕಾಬಾದ್‌, ಫತೆಹಪುರ್‌ ಸಿಕ್ರಿ, ಹರ್ದೋಯಿ, ಮೀರತ್‌, ಮಿರ್ಜಾಪುರ, ಮಿಸ್ರಿಖ್‌, ಫುಲ್ಪುರ್‌, ಶಹಜಹಾನಪುರ್‌ ಮತ್ತು ಉನ್ನಾವೋ.

ಈ ಹದಿನಾರು ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಅದರ ಮೈತ್ರಿ ಪಕ್ಷ ಕನಿಷ್ಠ ಎರಡೂವರೆ ಸಾವಿರ ಮತಗಳ ಅಂತರದಿಂದ ಗರಿಷ್ಟ 55 ಸಾವಿರ ಮತಗಳಿಂದ ಗೆದ್ದಿದೆ. ಇವೇ ಹದಿನಾರು ಕ್ಷೇತ್ರಗಳಲ್ಲಿ ಬಿಎಸ್ಪಿ ಕನಿಷ್ಠ 45 ಸಾವಿರ ಮತಗಳಿಂದ ಗರಿಷ್ಠ ಎರಡು ಲಕ್ಷದವರೆಗೆ ಮತಗಳನ್ನು ಪಡೆದಿದೆ. ಆದರೆ ಎಲ್ಲೂ ಬಿಎಸ್ಪಿ ಗೆದ್ದಿಲ್ಲ. ಆದರೆ ಬಿಜೆಪಿ ಅಥವಾ ಅದರ ಮೈತ್ರಿ ಪಕ್ಷ ಗೆಲ್ಲಲು ದಾರಿ ಸುಲಭ ಮಾಡಿ ಕೊಟ್ಟಿದೆ.

ಫಾರೂಖಾಬಾದ್ ನಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 2678 ಮತಗಳಿಂದ. ಅಲ್ಲಿ ಬಿಎಸ್ಪಿ ಪಡೆದ ಮತಗಳು 45,390. ಬನಸ್ಗಾಂವ್‌ ನಲ್ಲಿ ಬಿಜೆಪಿ ಗೆದ್ದಿದು ಕೇವಲ 3150 ಮತಗಳಿಂದ. ಅಲ್ಲಿ ಬಿಎಸ್ಪಿ ಗಳಿಸಿದ ಮತಗಳು 64,750. ಫೂಲ್ ಪುರ್ ನಲ್ಲಿ ಬಿಜೆಪಿ ಗೆದ್ದಿದು 4332 ಮತಗಳಿಂದ. ಅಲ್ಲಿ ಬಿಎಸ್ಪಿ ಬಾಚಿಕೊಂಡ ಮತಗಳು 82,586. ರಾಜ್ಯದಲ್ಲಿ 2019ರಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ ಸಿಕ್ಕಿದ್ದು ಕೇವಲ 33 ಸ್ಥಾನಗಳು. ಆದರೆ ಬಿಎಸ್ಪಿ ಮತ ವಿಭಜಿಸದೇ ಇದ್ದಿದ್ದರೆ ಬಿಜೆಪಿ 19ಕ್ಕೆ ಕುಸಿದು ದೊಡ್ಡ ಆಘಾತವನ್ನೇ ಎದುರಿಸುತ್ತಿತ್ತು.

ಬಿಎಸ್ಪಿ ಕಣದಲ್ಲಿ ಇಲ್ಲದೇ ಇರುತ್ತಿದ್ದರೆ ಅದರ ಎಲ್ಲ ಮಠಗಳು ಕಾಂಗ್ರೆಸ್ ಎಸ್ಪಿ ಮೈತ್ರಿಕೂಟಕ್ಕೆ ಹೋಗುತ್ತಿದ್ದವು ಎಂದು ಗ್ಯಾರಂಟಿ ಹೇಳುವಂತಿಲ್ಲ. ಆದರೂ ಈ ಬಾರಿ ಬಿಎಸ್ಪಿಯ ಭದ್ರಕೋಟೆಯಂತಹ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಎಸ್ಪಿ ಮೈತ್ರಿ ಅಭ್ಯರ್ಥಿಗಳಿಗೆ ಬಿಎಸ್ಪಿ ಮತದಾರರು ಬೆಂಬಲಿಸಿದ್ದು ಕಾಣುತ್ತಿದೆ. ಆ ಲೆಕ್ಕದಲ್ಲಿ ಬಿಎಸ್ಪಿ ಸ್ಪರ್ಧೆ ಕಾಂಗ್ರೆಸ್ ಎಸ್ಪಿ ಪಾಲಿನ ಕೆಲವು ಕ್ಷೇತ್ರಗಳಲ್ಲಿ ಅವುಗಳಿಗೆ ಮುಳುವಾಯಿತು ಎಂದು ಹೇಳಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News