ಥಾಣೆ| ಕಟ್ಟಡ ಕುಸಿತ: ಇಬ್ಬರು ಮೃತ್ಯು, 5 ಮಂದಿಗೆ ಗಾಯ

Update: 2023-09-03 07:28 GMT

Screengrab: Twitter/@Devesh81403955

ಭಿವಾಂಡಿ: ಒಂದು ಅಂತಸ್ತಿನ ಕಟ್ಟಡ ಕುಸಿದಿದ್ದರಿಂದ ಇಬ್ಬರು ಮೃತಪಟ್ಟು, 5 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದಲ್ಲಿ ನಡೆದಿದೆ ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮಧ್ಯರಾತ್ರಿ ಸುಮಾರು ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕುಸಿತಕ್ಕೀಡಾಗಿರುವ ಒಂದು ಅಂತಸ್ತಿನ ಕಟ್ಟಡದಲ್ಲಿ ಆರು ಫ್ಲ್ಯಾಟ್ ಗಳಿದ್ದು, ಈ ಕಟ್ಟಡವು ಭಿವಾಂಡಿ ಪಟ್ಟಣದ ಧೋಬಿ ತಲಾವ್ ಪ್ರದೇಶದ ದುರ್ಗಾ ರಸ್ತೆಯಲ್ಲಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಥಾಣೆ ಪ್ರಕೃತಿ ವಿಕೋಪ ಪ್ರತಿಸ್ಪಂದನಾ ಪಡೆ ಹಾಗೂ ಭಿವಾಂಡಿ ನಿಝಾಮ್ ಪುರ್ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡು, ಅವಶೇಷಗಳಡಿ ಸಿಲುಕಿದ್ದ ಏಳು ಮಂದಿಯನ್ನು ರಕ್ಷಿಸಲಾಗಿದೆ.

“ಘಟನೆಯಲ್ಲಿ ಎಂಟು ತಿಂಗಳ ಬಾಲಕಿ ಹಾಗೂ ಮಹಿಳೆಯೊಬ್ಬರು ಮೃತಪಟ್ಟಿದ್ದು, ಉಳಿದ ಐದು ಮಂದಿ ಗಾಯಗೊಂಡಿದ್ದಾರೆ” ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೃತಪಟ್ಟವರನ್ನು ಉಝ್ಮಾ ಅತೀಫ್ ಮೊಮಿನ್ (40) ಹಾಗೂ ತಸ್ಲೀಮಾ ಮೋಸರ್ ಮೊಮಿನ್ (8 ತಿಂಗಳು) ಎಂದು ಗುರುತಿಸಲಾಗಿದೆ.

ಗಾಯಾಳುಗಳ ಪೈಕಿ ನಾಲ್ವರು ಮಹಿಳೆಯರು ಹಾಗೂ 65 ವರ್ಷದ ಓರ್ವ ಪುರುಷ ಸೇರಿದ್ದಾರೆ. ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವು ಬೆಳಗ್ಗೆ ಸುಮಾರು 3.30 ಗಂಟೆಗೆ ಮುಕ್ತಾಯಗೊಂಡಿತು ಎಂದೂ ಅವರು ತಿಳಿಸಿದ್ದಾರೆ.

“ಈ ಕಟ್ಟಡ ನಿರ್ಮಾಣವಾಗಿ ಎಷ್ಟು ವರ್ಷವಾಗಿತ್ತು ಹಾಗೂ ಈ ಕಟ್ಟಡವೇನಾದರೂ ಶಿಥಿಲಾವಸ್ಥೆ ತಲುಪಿರುವ ಪಟ್ಟಿಯಲ್ಲಿತ್ತೆ ಎಂಬುದು ಇನ್ನೂ ತಿಳಿದು ಬಂದಿಲ್ಲ” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News