ಇನ್ನೊಂದು ವಾರದೊಳಗೆ ದೇಶಾದ್ಯಂತ ಸಿಎಎ ಜಾರಿ : ಕೇಂದ್ರ ಸಚಿವ ಶಂತನು ಠಾಕೂರ್

Update: 2024-01-29 17:04 GMT

ಶಂತನು ಠಾಕೂರ್ | Photo: NDTV  

ಕೋಲ್ಕತಾ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯು ಒಂದು ವಾರದೊಳಗೆ ದೇಶಾದ್ಯಂತ ಜಾರಿಗೊಳ್ಳಲಿದೆ ಎಂದು ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯಸಚಿವ ಶಂತನು ಠಾಕೂರ್ ಅವರು ಸೋಮವಾರ ಹೇಳಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಠಾಕೂರ್ ಈ ಮಾಹಿತಿಯನ್ನು ನೀಡಿದ್ದಾರೆ. ಠಾಕೂರ್ ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಯ ಮಟುವಾ ಸಮುದಾಯಕ್ಕೆ ಸೇರಿದ ಜನರು ಬಹುಸಂಖ್ಯಾಕರಾಗಿರುವ ಬೊಂಗಾಂವ್ನ ಬಿಜೆಪಿ ಸಂಸದರಾಗಿದ್ದಾರೆ.

‘ಸಿಎಎ ಅನ್ನು ಶೀಘ್ರ ಜಾರಿಗೊಳಿಸಲಾಗುವುದು. ಏಳು ದಿನಗಳಲ್ಲಿ ಅದು ಅನುಷ್ಠಾನಗೊಳ್ಳಲಿದೆ. ಇದು ನನ್ನ ಗ್ಯಾರಂಟಿ ’ ಎಂದು ಮಟುವಾ ಸಮುದಾಯದ ನಾಯಕರೂ ಆಗಿರುವ ಠಾಕೂರ್ ಹೇಳಿದರು.

ರವಿವಾರವೂ ಇಂತಹುದೇ ಹೇಳಿಕೆಯನ್ನು ನೀಡಿದ್ದ ಅವರು,ಈ ವರ್ಷದ ಲೋಕಸಭಾ ಚುನಾವಣೆಗಳಿಗೆ ಮುನ್ನ ದೇಶದಲ್ಲಿ ಸಿಎಎ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದರು.

ರಾಜ್ಯದ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ಮಟುವಾಗಳು ಆಗಿನ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ದಿಂದ ಮುಖ್ಯವಾಗಿ ಧಾರ್ಮಿಕ ಕಿರುಕುಳಗಳಿಂದಾಗಿ 1950ರಿಂದ ಪಶ್ಚಿಮ ಬಂಗಾಳಕ್ಕೆ ವಲಸೆಯನ್ನು ಆರಂಭಿಸಿದ್ದರು.

1990ರ ದಶಕದಿಂದಲೂ ಪಶ್ಚಿಮ ಬಂಗಾಳದಲ್ಲಿಯ ರಾಜಕೀಯ ಪಕ್ಷಗಳು ಮಟುವಾಗಳ ಬೆಂಬಲವನ್ನು ಪಡೆದುಕೊಳ್ಳಲು ಸಕ್ರಿಯವಾಗಿ ಪ್ರಯತ್ನಿಸುತ್ತಿವೆ. ಅವರ ಗಮನಾರ್ಹ ಜನಸಂಖ್ಯೆ ಮತ್ತು ಒಂದಾಗಿ ಮತ ಚಲಾಯಿಸುವ ಪ್ರವೃತ್ತಿಯಿಂದಾಗಿ ಮಟುವಾಗಳನ್ನು ಅಲ್ಪಸಂಖ್ಯಾತರಂತೆ ಮತ ಗುಂಪನ್ನಾಗಿ ಪರಿಗಣಿಸಲಾಗಿದೆ.

ಸಿಎಎ ಜಾರಿಯಿಂದ ಮತುವಾ ಸಮುದಾಯಕ್ಕೆ ಹೆಚ್ಚಿನ ಲಾಭವಾಗಲಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ‘ಬಹಳ ಮೊದಲೇ’ ಶಾಸನದ ನಿಯಮಗಳನ್ನು ಅಧಿಸೂಚಿಸಲಾಗುವುದು ಎಂಬ ವರದಿಗಳ ನಡುವೆಯೇ ಶಂತನು ಅವರ ಹೇಳಿಕೆಯು ಹೊರಬಿದ್ದಿದೆ.

ಸಿಎಎ ಅನ್ನು ತೀವ್ರವಾಗಿ ವಿರೋಧಿಸಿರುವ ಮತ್ತು ಅದನ್ನು ‘ವಿಭಜಕ ’ಎಂದು ಬಣ್ಣಿಸಿರುವ ಟಿಎಂಸಿ ಶಂತನು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ

‘ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೊಳ್ಳುವುದಿಲ್ಲ ಎಂದು ನಮ್ಮ ಪಕ್ಷದ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸ್ಪಷ್ಟವಾಗಿ ಹೇಳಿದ್ದಾರೆ ’ಎಂದು ಟಿಎಂಸಿ ಹೇಳಿದೆ.

ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೆ ಮುನ್ನ ಇಂತಹ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ರಾಜಕೀಯ ಗಿಮಿಕ್ ಗಳಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದರು.

ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆದಿದ್ದ ಬಿಜೆಪಿ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಿಎಎ ಈ ನೆಲದ ಕಾನೂನಾಗಿದೆ ಮತ್ತು ಅದರ ಜಾರಿಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ವಿವಾದಾತ್ಮಕ ಸಿಎಎ ಅನುಷ್ಠಾನವು ಪಶ್ಚಿಮ ಬಂಗಾಳದಲ್ಲಿ ಹಿಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಪ್ರಮುಖ ಭರವಸೆಯಾಗಿತ್ತು. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಈ ಭರವಸೆಯು ಪ್ರಮುಖ ಪಾತ್ರವನ್ನು ಹೊಂದಿದೆ ಎನ್ನುವುದು ಪಕ್ಷದ ನಾಯಕರ ನಂಬಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News