ಸಿಸೋಡಿಯಾ ಅವರನ್ನು ‘ಅನಿರ್ಧಿಷ್ಟ ಅವಧಿ’ಗೆ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Update: 2023-10-17 02:16 GMT

Manish Sisodia| Photo: PTI

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಮನೀಷ್ ಸಿಸೋಡಿಯಾ ಅವರನ್ನು ‘ಅನಿರ್ದಿಷ್ಟ ಅವಧಿ’ ಕಾರಾಗೃಹದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದೆ.

ಸಿಸೋಡಿಯಾ ವಿರುದ್ಧ ಆರೋಪಗಳ ಕುರಿತ ವಾದ ವಿಚಾರಣಾ ನ್ಯಾಯಾಲಯದಲ್ಲಿ ಯಾವಾಗ ನಡೆಯಲಿದೆ ಎಂದು ಎರಡು ತನಿಖಾ ಸಂಸ್ಥೆಗಳ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್. ಭಟ್ಟಿ ಅವರನ್ನು ಒಳಗೊಂಡ ಪೀಠ ಪ್ರಶ್ನಿಸಿತು.

‘‘ನೀವು ಅವರನ್ನು ಅನಿರ್ದಿಷ್ಟ ಅವಧಿ ಕಂಬಿಯ ಹಿಂದೆ ಇರಿಸಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಒಮ್ಮೆ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಆರೋಪದ ಕುರಿತ ವಾದವನ್ನು ಕೂಡಲೇ ನಡೆಸಬೇಕು’’ ಎಂದು ಪೀಠ ರಾಜು ಅವರಿಗೆ ತಿಳಿಸಿತು.

ಇದಕ್ಕೆ ರಾಜು ಅವರು, ಸಿಸೋಡಿಯಾ ವಿರುದ್ಧದ ಪ್ರಕರಣ ಇನ್ನೂ ದಾಖಲೆ ಪೂರೈಕೆ ಹಂತದಲ್ಲಿದೆ. ಈ ಪ್ರಕ್ರಿಯೆ ಅನಂತರ ವಿಚಾರಣೆ ಆರಂಭವಾಗಲಿದೆ ಎಂದರು.

ಇನ್ನೂ ವಿಚಾರಣೆ ಏಕೆ ಆರಂಭವಾಗಿಲ್ಲ. ಯಾವಾಗ ಆರಂಭವಾಗಲಿದೆ ಎಂಬ ಕುರಿತ ಮಾಹಿತಿಯನ್ನು ಮಂಗಳವಾರ ನ್ಯಾಯಪೀಠಕ್ಕೆ ನೀಡಬೇಕು ಎಂದು ನ್ಯಾಯಮೂರ್ತಿ ಖನ್ನಾ ಅವರಿಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News