ನ್ಯೂಸ್ ಕ್ಲಿಕ್‌ ವಿರುದ್ಧ ಎಫ್‌ಸಿಆರ್‌ಎ ಉಲ್ಲಂಘನೆ ಪ್ರಕರಣ ದಾಖಲಿಸಿದ ಸಿಬಿಐ

Update: 2023-10-11 17:41 GMT

ಹೊಸದಿಲ್ಲಿ : ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯ ಉಲ್ಲಂಘನೆ ಆರೋಪದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಬುಧವಾರ ನ್ಯೂಸ್ ಕ್ಲಿಕ್‌ ವಿರುದ್ಧ ಮೊದಲ ಮಾಹಿತಿ ವರದಿ ದಾಖಲಿಸಿದೆ.

ಸಿಬಿಐ ಅಧಿಕಾರಿಗಳ ತಂಡವೊಂದು ಬುಧವಾರ ನ್ಯೂಸ್ ಕ್ಲಿಕ್ ಸಂಸ್ಥೆಯ ಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ನಿವಾಸ ಮತ್ತು ಕಚೇರಿಯಲ್ಲಿ ಶೋಧ ಕಾರ್ಯಾಚರಣೆಯನ್ನೂ ನಡೆಸಿತು. ಸಿಬಿಐ ಅಧಿಕಾರಿಗಳು ಪುರಕಾಯಸ್ಥ ಅವರ ಸಂಗಾತಿ ಹಾಗೂ ಲೇಖಕಿ ಗೀತಾ ಹರಿಹರನ್ ಅವರನ್ನೂ ಪ್ರಶ್ನಿಸಿದರು.

‘‘ಇದು ನಮ್ಮನ್ನು ತನಿಖೆಗೊಳಪಡಿಸಿದ ಐದನೇ ಸಂಸ್ಥೆಯಾಗಿದೆ’’ ಎಂದು ನ್ಯೂಸ್ ಕ್ಲಿಕ್‌ ‘ಎಕ್ಸ್’ನಲ್ಲಿ ಹೇಳಿದೆ. ‘‘ನಾವು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ’’ ಎಂದೂ ಅದು ತಿಳಿಸಿದೆ.

ದಿಲ್ಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಸಲ್ಲಿಸಿದ ಮೊಕದ್ದಮೆಯಲ್ಲಿ, ಪುರಕಾಯಸ್ಥ ಮತ್ತು ನ್ಯೂಸ್ ಕ್ಲಿಕ್‌ ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರಬರ್ತಿಯನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಒಂದು ದಿನದ ಬಳಿಕ ಸಿಬಿಐ ದಾಳಿ ನಡೆದಿದೆ.

2021ರಲ್ಲಿ, ದಿಲ್ಲಿ ಪೊಲೀಸರ ಆರ್ಥಿಕ ಅಪರಾಧಗಳ ಘಟಕವು ನ್ಯೂಸ್ ಕ್ಲಿಕ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಡಿಜಿಟಲ್ ನ್ಯೂಸ್ ವೆಬ್ ಸೈಟ್ ನಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಯನ್ನು 26%ಕ್ಕೆ ಮಿತಿಗೊಳಿಸುವ ಕಾನೂನೊಂದನ್ನು ಉಲ್ಲಂಘಿಸಿ ಅದು ಅಮೆರಿಕದ ಕಂಪೆನಿಯೊಂದರಿಂದ ವಿದೇಶಿ ನೇರ ಹೂಡಿಕೆ ಸ್ವೀಕರಿಸಿದೆ ಎಂಬುದಾಗಿ ಆರೋಪಿಸಲಾಗಿತ್ತು.

ಆ ಪ್ರಕರಣಕ್ಕೆ ಸಂಬಂಧಿಸಿ, 2021 ಫೆಬ್ರವರಿಯಲ್ಲಿ ಅನುಷ್ಠಾನ ನಿರ್ದೇಶನಾಲಯವು ನ್ಯೂಸ್ ಕ್ಲಿಕ್ ನ ಕಚೇರಿಗಳು ಮತ್ತು ಸಂಪಾದಕರ ಮನೆಯ ಮೇಲೆ ದಾಳಿ ನಡೆಸಿತ್ತು.

ಅದು ಆಗಸ್ಟ್ 17ರಂದು ನ್ಯೂಸ್ ಕ್ಲಿಕ್‌ ವಿರುದ್ಧ ಇನ್ನೊಂದು ಮೊಕದ್ದಮೆಯನ್ನು ದಾಖಲಿಸಿತ್ತು. ಈ ವೆಬ್ ಸೈಟ್ ಐದು ವರ್ಷಗಳ ಅವಧಿಯಲ್ಲಿ ವಿದೇಶಿ ನಿಧಿಗಳನ್ನು ಸ್ವೀಕರಿಸುವ ಮೂಲಕ ಭಾರತದ ಸಾರ್ವಭೌಮತೆಯ ವಿರುದ್ಧ ಪಿತೂರಿ ನಡೆಸಿದೆ ಎಂದು ಅದು ಆರೋಪಿಸಿತ್ತು.

ಚೀನಾ ಪರ ಪ್ರಚಾರಕ್ಕಾಗಿ ಅಮೆರಿಕನ್ ಉದ್ಯಮಿ ನೆವಿಲ್ ರಾಯ್ ಸಿಂಘಮ್ ಗೆ ಸೇರಿದ ಸಂಘಟನೆಗಳಿಂದ ನ್ಯೂಸ್ ಕ್ಲಿಕ್‌ ಹಣ ಸ್ವೀಕರಿಸಿದೆ ಎಂದು ಅದು ಆರೋಪಿಸಿದೆ.

ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ಭಯೋತ್ಪಾದನೆ ಎಂದು ಹೇಗೆ ಕರೆಯುತ್ತೀರಿ? : ನ್ಯೂಸ್ ಕ್ಲಿಕ್‌ ಪರ ವಕೀಲರ ಪ್ರಶ್ನೆ

ಮಂಗಳವಾರ ನಡೆದ ವಿಚಾರಣೆಯಲ್ಲಿ, ಆರೋಪಿಗಳ ವಿರುದ್ಧ ಎಫ್ಐಆರ್ನಲ್ಲಿ ದಾಖಲಾಗಿರುವ ಅಪರಾಧಗಳನ್ನು ಸಾಬೀತುಪಡಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ’ನ್ಯೂಸ್ ಕ್ಲಿಕ್‌ ಪರವಾಗಿ ವಾದಿಸಿದ ವಕೀಲ ಅರ್ಶದೀಪ್ ಖುರಾನ ಹೇಳಿದರು.

‘‘ಯಾವ ಭಯೋತ್ಪಾದಕ ಕೃತ್ಯವನ್ನು ನನ್ನ ಕಕ್ಷಿದಾರ ಮಾಡಿದ್ದಾರೆ? ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ಭಯೋತ್ಪಾದನೆ ಎಂದು ಹೇಗೆ ಕರೆಯಲು ಸಾಧ್ಯ?’’ ಎಂದು ಅವರು ಪ್ರಶ್ನಿಸಿದರು.

ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುವ ವರದಿಗಳ ವಿಷಯದಲ್ಲಿ ನಾವು ಸಿಂಘಮ್ನಿಂದ ಸೂಚನೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆಯೊಂದರಲ್ಲಿ ‘ನ್ಯೂಸ್ ಕ್ಲಿಕ್‌ ತಿಳಿಸಿದೆ.

‘‘ಟೀಕೆಯನ್ನು ದೇಶದ್ರೋಹ ಅಥವಾ ‘ರಾಷ್ಟ್ರವಿರೋಧಿ ಪ್ರಚಾರ’ ಎಂಬುದಾಗಿ ಪರಿಗಣಿಸುವ ಮನೋಸ್ಥಿತಿಯನ್ನು ಭಾರತ ಸರಕಾರ ಹೊಂದಿದೆ ಎನ್ನುವುದುನ್ನು ನಮ್ಮ ವಿರುದ್ಧ ಭಯೋತ್ಪಾದನೆ ವಿರುದ್ಧ ಕಾನೂನಿನಡಿ ದಾಖಲಾಗಿರುವ ಮೊಕದ್ದಮೆ ಹೇಳುತ್ತದೆ’’ ಎಂದು ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News