ಸಿಬಿಎಸ್ಇ ಮಾನ್ಯತೆ | ಅಮಾನತುಗೊಂಡಿದ್ದ ಮೂವರು ಶಿಕ್ಷಣಾಧಿಕಾರಿಗಳ ಕ್ಷಮೆಯಾಚನೆ
ಇಂಫಾಲ/ಗುವಾಹಟಿ: ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದ ಸಂದರ್ಭದಲ್ಲಿ ಸೂಕ್ತ ಪ್ರಕ್ರಿಯೆಗಳನ್ನು ಪಾಲಿಸದೆ ಎರಡು ಜಿಲ್ಲೆಗಳಲ್ಲಿನ ಶಾಲೆಗಳಿಗೆ ಸಿಬಿಎಸ್ಇ ಮಾನ್ಯತೆಗಾಗಿ ಅರ್ಜಿ ಸಲ್ಲಿಸಲು ನಿರಾಕ್ಷೇಪಣಾ ಪತ್ರ ನೀಡಿದ್ದಕ್ಕಾಗಿ ಜನವರಿ 12ರಂದು ಅಮಾನತುಗೊಂಡಿದ್ದ ಮಣಿಪುರದ ಮೂವರು ಹಿರಿಯ ಶಿಕ್ಷಣಾಧಿಕಾರಿಗಳು ಸರ್ಕಾರಕ್ಕೆ ಕ್ಷಮಾಪಣೆ ಪತ್ರ ಬರೆದಿದ್ದಾರೆ ಎಂದು ndtv.com ವರದಿ ಮಾಡಿದೆ.
ನಿರಾಕ್ಷೇಪಣಾ ಪತ್ರಗಳಿಗೆ ಸಹಿ ಮಾಡಬೇಕು ಎಂದು ಚುನಾಯಿತ ಪ್ರತಿನಿಧಿಗಳು, ನಾಗರಿಕ ಸಮಾಜ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಾಯ ಹಾಗೂ ಒತ್ತಡವಿತ್ತು ಎಂದು ಈ ಮೂವರು ಅಧಿಕಾರಿಗಳು ಸರ್ಕಾರಕ್ಕೆ ಬರೆದಿರುವ ಕ್ಷಮಾಪಣೆ ಪತ್ರದಲ್ಲಿ ತಪ್ಪೊಪ್ಪಿಗೆ ನೀಡಿದ್ದಾರೆ.
ತಮ್ಮ ಕ್ಷಮಾಪಣಾ ಪತ್ರದೊಂದಿಗೆ ಶಿಕ್ಷಣಾಧಿಕಾರಿಗಳು ಲಗತ್ತಿಸಿರುವ ದಾಖಲೆಗಳ ಪ್ರಕಾರ, ಚುರಾಚಂದಪುರ ಜಿಲ್ಲೆಯ ನಾಲ್ಕು ಶಾಸಕರು ಹಾಗೂ ಕಾಂಗ್ಪೋಕ್ಪಿ ಜಿಲ್ಲೆಯ ಇಬ್ಬರು ಶಾಸಕರು ಇಬ್ಬರು ವಲಯ ಶಿಕ್ಷಣಾಧಿಕಾರಿಗಳು ಹಾಗೂ ಓರ್ವ ಶಾಲಾ ಉಪ ಪರಿವೀಕ್ಷಣಾಧಿಕಾರಿಗೆ ನಿರಾಕ್ಷೇಪಣಾ ಪತ್ರ ನೀಡುವಂತೆ ಪತ್ರ ಬರೆದಿರುವುದು ಕಂಡು ಬಂದಿದೆ.
ಈ ದಾಖಲೆಗಳು NDTV ಸುದ್ದಿ ಸಂಸ್ಥೆಗೆ ಲಭ್ಯವಾಗಿದೆ ಎಂದು ವರದಿಯಾಗಿದೆ. ಮಣಿಪುರದಿಂದ ಪ್ರತ್ಯೇಕ ಆಡಳಿತಕ್ಕೆ ಆಗ್ರಹಿಸುತ್ತಿರುವ 10 ಕುಕಿ-ಝೊ ಶಾಸಕರ ಪೈಕಿ ಆರು ಶಾಸಕರು ಈ ಪತ್ರಗಳನ್ನು ಬರೆದಿದ್ದಾರೆ.
ರಾಜ್ಯ ಸರ್ಕಾರವು ತಾನು ರಾಜ್ಯದ ಚುರಾಚಂದಪುರ ಹಾಗೂ ಕಾಗ್ಪೋಕ್ಪಿ ಜಿಲ್ಲೆಗಳ 25 ಶಾಲೆಗಳಿಗೆ ಪ್ರಥಮ ಆದ್ಯತೆಯಾಗಿ ಮಾನ್ಯತೆಗೆ ಅರ್ಜಿ ಸಲ್ಲಿಸಲು ನಿರಾಕ್ಷೇಪಣಾ ಪತ್ರವನ್ನು ಒದಗಿಸಿಲ್ಲ ಎಂದು ಡಿಸೆಂಬರ್ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಗಮನಕ್ಕೆ ತಂದ ನಂತರ, ಆ ಶಾಲೆಗಳ ಮಾನ್ಯತಾ ಪತ್ರವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ರದ್ದುಗೊಳಿಸಿತ್ತು.
ಕೇಂದ್ರೀಯ ಮಂಡಳಿಯ ಮಾನ್ಯತೆಗಾಗಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಗಳು ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಕಾನೂನಾತ್ಮಕ ಅಗತ್ಯವನ್ನಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಬೈಲಾದಲ್ಲಿ ಸೇರ್ಪಡೆ ಮಾಡಲಾಗಿದೆ.