ಜುಲೈ 13ರಂದು ಚಂದ್ರಯಾನ-3 ಉಡಾವಣೆ
ಹೊಸದಿಲ್ಲಿ,ಜೂ.28: ಬಹುನಿರೀಕ್ಷಿತ ಚಂದ್ರಯಾನ-3ರ ಉಡಾವಣಾ ದಿನಾಂಕವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ದೃಢಪಡಿಸಿದೆ.
ಜುಲೈ 13ರಂದು ಸ್ಥಳೀಯ ಕಾಲಮಾನ 2:30ರ ವೇಳೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆಯಾಗಲಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಚಂದ್ರನೆಡೆಗೆ ಭಾರತದ ಮೂರನೇ ನೌಕಾಯಾನ ಇದಾಗಿದ್ದು, ಬಾಹ್ಯಾಕಾಶ ಸಂಶೋಧನೆಯಲ್ಲಿ ದೇಶದ ಇನ್ನೊಂದು ಮಹತ್ವದ ಹೆಜ್ಜೆ ಎಂದು ಇಸ್ರೋ ಬಣ್ಣಿಸಿದೆ.
ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ನಿಂದ ಉಡಾವಣೆ ನಡೆಯಲಿದೆ. ಈ ಮಿಶನ್ಗೆ ಒಟ್ಟು 615 ಕೋಟಿ ರೂ. ವೆಚ್ಚವಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಅಪಾಯಗಳನ್ನು ಕಡಿಮೆಗೊಳಿಸಲು ಹಾಗೂ ಮಿಶನ್ನ ಯಶಸ್ಸನ್ನು ಖಾತರಿಪಡಿಸುವ ಉದ್ದೇಶದಿಂದ ಚಂದ್ರಯಾನ-3 ಮಿಶನ್ ಕಠಿಣವಾದ ಪರೀಕ್ಷೆ ಹಾಗೂ ಮೌಲ್ಯೀಕರಣ ಪ್ರಕ್ರಿಯೆಗೆ ಒಳಗಾಗಲಿದೆ. ಈ ಹಿಂದಿನ ಚಂದ್ರಯಾನ ಯೋಜನೆಗಳಿಂದ ಕಲಿತ ಅನುಭವಗಳನ್ನು ಆಧರಿಸಿ ಲೂನಾರ್ ಪೇಲೋಡ್ ಕಾನ್ಫಿಗರೇಶನ್ ಸೇರಿದೆ ನೌಕೆಯ ವಿನ್ಯಾಸವನ್ನು ಉತ್ಕೃಷ್ಟಗೊಳಿಸಲಾಗಿದೆ.
ಚಂದ್ರಯಾನ3ರ ಯಶಸ್ಸನ್ನು ಖಾತರಿಪಡಿಸಲು ಇಸ್ರೋ ಈ ಸಲ ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ಚಂದ್ರಯಾನ2ನಲ್ಲಿ ಇದ್ದಂತೆಯೇ ಚಂದ್ರಯಾನ3 ಮಿಶನ್ನಲ್ಲಿ ಲ್ಯಾಂಡರ್ ಹಾಗೂ ರೋವರ್ ಇರಲಿದೆ, ಆದರೆ ಆರ್ಬಿಟರ್ ಅನ್ನು ಒಯ್ಯುವುದಿಲ್ಲ. ಸಂವಹನ ರಿಲೇ ಉಪಗ್ರಹದ ಹಾಗೆ ವರ್ತಿಸಲು ವಿನ್ಯಾಸಗೊಳಿಸಲಾದ ಪ್ರೊಪಲ್ಶನ್ ಮೊಡ್ಯೂಲ್ ಒಂದು, ನೌಕೆಯು ಚಂದ್ರನ ಕಕ್ಷೆಯಿಂದ 100 ಕಿ.ಮೀ. ದೂರದಲ್ಲಿ ಇರುವವರೆಗೆ ಲ್ಯಾಂಡರ್ ಹಾಗೂ ರೋವರ್ ಅನ್ನು ಒಯ್ಯಲಿದೆ.
ಚಂದ್ರಯಾನ 3 ಮಿಶನ್ ಗೆ ಮೂರು ಪ್ರಮುಖ ಗುರಿಗಳನ್ನು ಇಸ್ರೋ ನಿಗದಿಪಡಿಸಿದೆ. ಚಂದ್ರನ ಮೇಲೆ ಸುರಕ್ಷಿತ ಹಾಗೂ ಮೃದುವಾದ ಇಳಿಯುವಿಕೆಯನ್ನು ಸಾಧಿಸುವುದು, ಚಂದ್ರನ ಮೇಲ್ಮೈ ಮೇಲೆ ರೋವರ್ನ ಅಡ್ಡಾಡುವ ಸಾಮರ್ಥ್ಯವನ್ನು ಪ್ರದರ್ಶಿಸುವುದು ಹಾಗೂ ಚಂದ್ರನಲ್ಲಿ ವೈಜ್ಞಾನಿಕ ವೀಕ್ಷಣೆಗಳನ್ನು ನಡೆಸುವುದು ಇವು ಆ ಮೂರು ಪ್ರಮುಖ ಉದ್ದೇಶಗಳಾಗಿವೆ.
ಚಂದ್ರನ ಮೇಲ್ಮೈಯಲ್ಲಿರುವ ಲಭ್ಯವಿರುವ ರಾಸಾಯನಿಕ ಹಾಗೂ ನೈಸರ್ಗಿಕ ಅಂಶಗಳು, ಮಣ್ಣು ಹಾಗೂ ನೀರಿನ ಅಸ್ತಿತ್ವದ ಕುರಿತು ಅನ್ವೇಷಣೆ ನಡೆಸುವ ಉದ್ದೇಶವನ್ನು ಇಸ್ರೋ ಹೊಂದಿದೆ.